ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. 2020ರ ಆಗಸ್ಟ್ 17 ರಂದು ನಡೆದಿದ್ದ ಹಂದಿ ಸಾಕುವವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
2020ರ ಆಗಸ್ಟ್ 17 ರಂದು ಸೀನಪ್ಪ(53), ಅವರ ಮಗ ಯಲ್ಲೇಶ್(22) ಹಾಗೂ ಸೀನಪ್ಪನ ತಮ್ಮನ ಮಗ ಮಾರೇಶ್(23) ರವರ ಹತ್ಯೆಯಾಗಿತ್ತು. ಹಂದಿ ಸಾಕಣೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಕೊಲೆ ಇದಾಗಿದ್ದು, ರಾಣೆಬೆನ್ನೂರು ಮೂಲದ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಪ್ಪ(35), ಮಾರುತಿ(20), ಮಂಜಪ್ಪ(28), ಸುರೇಶ್(22), ಚೌಡಪ್ಪ(35), ಕೃಷ್ಣ(26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ನಾಯಕನಹಟ್ಟಿಯಲ್ಲಿ ವಾಸವಿರುವ ವ್ಯಕ್ತಿಗೆ ತಮ್ಮ ಸಹೋದರಿಯರಿಯನ್ನು ಆರೋಪಿಗಳು ಮದುವೆ ಮಾಡಿಕೊಟ್ಟಿದ್ದರು. ಆರೋಪಿಗಳು, ಮದುವೆ ಮಾಡಿಕೊಟ್ಟಿದ್ದ ಸಹೋದರಿಯ ಕುಟುಂಬದವರ ವ್ಯವಹಾರಕ್ಕೆ ಅಡ್ಡಿಯಾಗಿದ್ದ ಮೃತರ ಹಂದಿಗಳನ್ನು ಕಳ್ಳತನ ಮಾಡಿದ್ದಲ್ಲದೆ, ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.