ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಕೇವಲ 48ಗಂಟೆಗಳಲ್ಲೇ ಭೇದಿಸಿದ್ದಾರೆ.
ಆಗಸ್ಟ್31ರ ಬೆಳಗ್ಗೆ ಚಿತ್ರದುರ್ಗ ತಾಲೂಕಿನ ಕಡ್ಲೇಗುದ್ದು ಗ್ರಾಮದ ಸಮೀಪ ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಬೊಮ್ಮನಹಳ್ಳಿ ನಿವಾಸಿ ವೆಂಕಟೇಶ್ (45) ಗಾಯಗೊಂಡಿದ್ದ. ತಕ್ಷಣ ಗಾಯಾಳುವನ್ನು ಆಟೋ ಮೂಲಕ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದ
ಮೃತನ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ದೇಹದ ಮೇಲಾಗಿದ್ದ ಗಾಯಗಳನ್ನು ನೋಡಿ ಅನುಮಾನಗೊಂಡ ಗ್ರಾಮಾಂತರ ಠಾಣೆ ಪೊಲೀಸರು, ವಿಚಾರಣೆ ನಡೆಸಿದಾಗ ಮಂಜುನಾಥ್ ಎಂಬಾತ ಬೈಕಿನಲ್ಲಿ ಕರೆದೊಯ್ದ ಮಾಹಿತಿ ಸಿಕ್ಕಿದೆ. ಕೂಡಲೇ ಬೊಮ್ಮನಹಳ್ಳಿ ಗ್ರಾಮದ ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಕ್ಕನ ಗಂಡ ಪ್ರಕಾಶ್ ಮತ್ತವರ ಕುಟುಂಬದ ಜೊತೆ ಕುರಿಗಳು ಹೊಲದಲ್ಲಿ ಮೇಯ್ದ ವಿಚಾರಕ್ಕೆ ವೆಂಕಟೇಶ್ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ, ಜೊತೆಗೆ ಕೆಲಸ ಮಾಡುವ ಸ್ಥಳದಲ್ಲಿ ನಡೆಸಲಾಗುತ್ತಿದ್ದ ಚೀಟಿ ವ್ಯವಹಾರದಲ್ಲೂ ಭಾವ ಪ್ರಕಾಶ್ ಗೆ ಕೊಡಬೇಕಿದ್ದ ಹಣ ಕೊಡದೇ ಸತಾಯಿಸುತ್ತಿದ್ದ. ಇದೇ ಕಾರಣಕ್ಕೆ ನಾನೇ ಆತನ ಮೇಲೆ ಹಲ್ಲೆಮಾಡಿ ಕೊಂದಿರುವುದಾಗಿ ಮಂಜುನಾಥ್ ಬಾಯಿ ಬಿಟ್ಟಿದ್ದಾನೆ.
ಈ ಮೂಲಕ ಕೇವಲ 48ಗಂಟೆಯೊಳಗೆ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಮಂಜುನಾಥ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.