ಚಿತ್ರದುರ್ಗ: ಟ್ರ್ಯಾಕ್ಟರ್ ಕೊಡಿಸುವುದಾಗಿ ನಂಬಿಸಿ, ರೈತನಿಗೆ ವಂಚಿಸಿದ್ದ ಆರು ಜನ ಖದೀಮರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಗ್ರಾಮದ ನಿವಾಸಿ ನಿಂಗಪ್ಪ ವಂಚನೆಗೊಳಗಾದವರು. ಹೊಸದಾಗಿ ಬಂದಿರುವ ಪ್ರೀತ್ ಟ್ರ್ಯಾಕ್ಟರ್ ಕಂಪನಿ ಚೆನ್ನಾಗಿದೆ ಎಂದು ಹೇಳಿ, ಟ್ರ್ಯಾಕ್ಟರ್ ಖರೀದಿಸಲು ಎಸ್ಬಿಐ ಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ವಂಚಿಸಿ ಎಸ್ಬಿಐ ಬ್ಯಾಂಕ್ನಲ್ಲಿ ಮಾರ್ಟ್ಗೇಜ್ ಮಾಡಿಸಿ ದೂರುದಾರ ನಿಂಗಪ್ಪನ ಹೆಸರಿನಲ್ಲಿ ಬ್ಯಾಂಕಿನಲ್ಲಿ 5,96,500 ಸಾಲ ಪಡೆದು, ಟ್ರ್ಯಾಕ್ಟರ್ ಕೊಡಿಸದೆ ವಂಚಿಸಿದ್ದರು.
ಮೋಸ ಹೋದ ನಿಂಗಪ್ಪ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ವಿಚಾರಣೆ ನಡೆಸಿದ ಪೊಲೀಸರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನಲೆ ತಪ್ಪಿತಸ್ಥರಾದ ರವಿ, ಮಂಜುನಾಥ, ಮಹೇಶ್, ರಾಜೇಂದ್ರ, ಶಾಂತವೀರಯ್ಯ, ಬಸವರಾಜಪ್ಪ ಎಂಬುವರಿಗೆ ಚಿತ್ರದುರ್ಗದ ಎರಡನೇಯ ಹಿರಿಯ ಸಿಜೆ, ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಹೆಚ್ಎಂ ದೇವರಾಜು ಅವರು ಖದೀಮರಿಗೆ ಮೂರು ವರ್ಷ ಸಜೆ, ದಂಡ ಸಹ ವಿಧಿಸಿದ್ದಾರೆ. ಒಟ್ಟು 1,50,000 ದಂಡದ ಹಣದಲ್ಲಿ ರೈತ ನಿಂಗಪ್ಪನಿಗೆ ಅರ್ಧ ಭಾಗ ಪರಿಹಾರ ನೀಡಬೇಕೆಂದೂ ಆದೇಶ ಹೊರಡಿಸಿದ್ದಾರೆ.