ಚಿತ್ರದುರ್ಗ: ಕಾಂಗ್ರೆಸ್ ಮುಖಂಡ ಸಲೀಂ ಮತ್ತು ಮಾಜಿ ಸಂಸದ ಉಗ್ರಪ್ಪ ಅವರಿಗೆ ತಮ್ಮ ಪಕ್ಷದಲ್ಲಿನ ಭ್ರಷ್ಟಾಚಾರ ಈಗ ಜ್ಞಾನೋದಯ ಆಗಿದೆ ಎಂದು ಅನಿಸುತ್ತಿದೆ. ಸತ್ಯಾಸತ್ಯತೆಯನ್ನು ತಡವಾಗಿಯಾದರೂ ಬಾಯ್ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ನಗರದಲ್ಲಿ ಡಿ ಕೆ ಶಿವಕುಮಾರ್ ಡೀಲಿಂಗ್ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರದ ಬಗ್ಗೆ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ, ಅದನ್ನು ಬಹಿರಂಗಪಡಿಸಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಜಗಳ ಶುರುವಾಗಿದೆ, ಮೊದಲು ಅದನ್ನು ಶಮನಗೊಳಿಸಲಿ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಂಡರೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಆಗಲ್ಲ, ಸಿದ್ದರಾಮಯ್ಯ ಅವರನ್ನು ಕಂಡರೆ ಡಿಕೆಶಿಗೆ ಆಗಲ್ಲ ಎಂದರು.
ಬಿಜೆಪಿ ಸರ್ಕಾರ ಕೊಲೆಗಡುಕ ಸರ್ಕಾರ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಚಿವ ಭಗವಂತ ಖೂಬಾ ತಿರುಗೇಟು ನೀಡಿ, 2013 ರಿಂದ 18ರವರೆಗೆ ಅಧಿಕಾರಿಗಳು, ಹಿಂದೂ ಕಾರ್ಯಕರ್ತರ ಕೊಲೆ, ರೈತರ ಆತ್ಮಹತ್ಯೆ ಹೆಚ್ಚಾಗಿ ಆಗಿರುವುದು ಯಾರ ಸರ್ಕಾರ ಆಡಳಿತಾವಧಿಯಲ್ಲಿ ಎಂಬುದನ್ನು ಸಿದ್ಧರಾಮಯ್ಯ ನೆನಪಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ಕೆಪಿಸಿಸಿ ಮಾಧ್ಯಮ ಸಮನ್ವಯಕಾರ ಸಲೀಂ ತಲೆದಂಡ: ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ನೀಡಿಲ್ಲ, ಜಾತಿ ಲೆಕ್ಕಾಚಾರದಲ್ಲಿ ಆಡಳಿತ ಮುಗಿಸಿದರು. ಹಿಂದೂಗಳಿಗೆ ಬೈದರೆ ಮುಸ್ಲಿಂರು ಕಾಂಗ್ರೆಸ್ ಪರ ಎಂಬ ಭ್ರಮೆಯಲ್ಲಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಭ್ರಮೆಯಿಂದ ಹೊರ ಬರಬೇಕು ಎಂದು ಸಚಿವ ಖೂಬಾ ಹೇಳಿದರು.