ಚಿತ್ರದುರ್ಗ: ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಂದ್ರದ ನಡೆ ನಿದ್ದೆ ಬಂದವರಿಗೆ ನಿದ್ದೆ ಮಾತ್ರೆ ನೀಡಿದಂತಿದೆ. ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ಮದ್ಯ ಮಾರಾಟ ತಡೆಯಬೇಕೆಂದು ಮನವಿ ಮಾಡಿದರು.
ಕೊನೆ ಪಕ್ಷ ಕೊರೊನಾ ಸಂಕಷ್ಟ ಅಂತ್ಯದವರೆಗಾದರೂ ತಡೆಯಬೇಕು. ಇಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಮುಖ್ಯ. ಸರ್ಕಾರಕ್ಕೆ ಬರುವ ಆದಾಯವೇ ಮುಖ್ಯ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಜನರನ್ನು ಕುಡಿಸಿ ಸಾವಿನಂಚಿಗೆ ತಳ್ಳಿ ಆದಾಯ ಪಡೆಯುವುದು ಸಲ್ಲದು. ಜನರನ್ನು ಕುಡಿಸುವುದು ಮನ ಮೆಚ್ಚುವ, ಮಹಾದೇವ ಮೆಚ್ಚುವ ಕಾರ್ಯವಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಮದ್ಯ ನಿಷೇಧಕ್ಕೆ ಸರ್ಕಾರ ದಾರಿ ಮಾಡಿಕೊಳ್ಳಲಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.