ಚಿತ್ರದುರ್ಗ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ 43 ಜನ್ರ ಮೇಲೆ ತೀವ್ರ ನಿಗಾ ವಹಿಸಿದೆ.
ಪ್ರಪಂಚದಾದ್ಯಂತ ತಾಂಡವವಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಜನ್ರು ಭಯಭೀತರಾಗಿ ಹೈರಾಣಾಗಿದ್ದಾರೆ. ಈ ಸೋಂಕು ಸ್ಥಳೀಯ ಭಾರತೀಯರಲ್ಲಿ ಕಾಣಿಸಿಕೊಳ್ಳುವ ಬದಲಾಗಿ ಹೆಚ್ಚು ವಿದೇಶದಿಂದ ಸ್ವದೇಶಕ್ಕೆ ಮರಳುವ ನಾಗರಿಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂತಹವರ ಮೇಲೆ ಸ್ಥಳೀಯ ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ 43 ಜನ್ರ ಮೇಲೆ ತೀವ್ರ ನಿಗಾ ವಹಿಸಿದೆ. ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ 43 ಜನರನ್ನು ಮನೆಯಲ್ಲೇ ಇರಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಒಟ್ಟು 16 ಜನರ ರಕ್ತದ ಮಾದರಿ ಪಡೆದು ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಈಗಾಗಲೇ 6 ಜನರಿಗೆ ಕೊರೊನಾ ನೆಗೆಟಿವ್ ಬಂದಿದ್ದು, ಇನ್ನೂ10 ಜನರ ವರದಿ ವೈದ್ಯರ ಕೈ ಸೇರಬೇಕಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಪಾಲಕ್ಷಾ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.