ಚಿತ್ರದುರ್ಗ: ಜ.26 ಹಾಗೂ 27 ರಂದು ಎರಡು ದಿನಗಳ ಕಾಲ ನಗರದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾಹಿತಿ ನೀಡಿದರು.
ನಗರದ ಜಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯದ 156 ಪದಾಧಿಕಾರಿಗಳು ಭಾಗಿಯಾಗಲಿದ್ದು, ಸಭೆಯು ನಗರದ ತುರುವನೂರು ರಸ್ತೆ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆಸಲಿದೆ ಎಂದರು.
ಜ.26 ರಂದು ಸಂಜೆ ಯುವ ಮೋರ್ಚಾದ ಕಾರ್ಯಕರ್ತರೊಂದಿಗೆ ಸಭೆ ನಡೆಯಲಿದೆ. ಬಳಿಕ ಜ.27 ರಂದು ಬೆಳಗ್ಗೆ 9.30ಕ್ಕೆ ನಗರದಲ್ಲಿ ಶೋಭಯಾತ್ರೆ ನಡೆಸಲಾಗುವುದು.
ಸಭೆಯಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮಲು, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.