ಚಿತ್ರದುರ್ಗ: ರೈತರ ಹೆಸರಿನಲ್ಲಿ ರಾಜಕೀಯ, ಪುಂಡಾಟ, ದಾಂಧಲೆ ಮಾಡುವುದು ರೈತರ, ದೇಶಭಕ್ತರ ಕೆಲಸವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳಿಂದ ದುಷ್ಕೃತ್ಯ ಎಸಗಲಾಗುತ್ತಿದೆ. ಹೋರಾಟದ ಹೆಸರಿನಲ್ಲಿ ಕೆಂಪುಕೋಟೆ ಮೇಲೆ ದಾಳಿ ಮಾಡುವುದು, ರಾಷ್ಟ್ರಧ್ವಜ ಕೀಳುವುದು ಸಮಂಜಸವಲ್ಲ. ಕೆಲವು ರಾಜಕೀಯ ಪಕ್ಷಗಳು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪಿಸ್ತೂಲ್ ಹಿಡಿದು ತಿರುಗುತ್ತಾರೆ, ಹೋರಾಟದ ನೆಪದಲ್ಲಿ ನಿನ್ನೆ ತಲ್ವಾರ್ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ವಿಚಾರ, ಸಿದ್ಧಾಂತ, ದೇಶವನ್ನೂ ಮರೆತಿದೆ. ಅಧಿಕಾರಕ್ಕಾಗಿ ಭಯೋತ್ಪಾದಕ ಕೃತ್ಯಕ್ಕೆ ಇಳಿದಿದೆ ಎಂದು ಗರಂ ಆದರು.ದೆಹಲಿ ದಾಂಧಲೆ ಪ್ರಕರಣದ ತನಿಖೆ ಆಗಬೇಕಿದೆ. ದೇಶದ ರೈತರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಅಧಿಕಾರ ಇಲ್ಲದಾಗ ಕಾಂಗ್ರೆಸ್ ಪಕ್ಷ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ. ಅಧಿಕಾರವಿದ್ದಾಗ ಮಾತ್ರ ಪ್ರತಿಪಕ್ಷಗಳನ್ನು ಮಣಿಸುವ ನೀತಿ ಅನುಸರಿಸುತ್ತದೆ, ಅಧಿಕಾರ ಇಲ್ಲದಾಗ ಅಶಾಂತಿ , ಗಲಭೆ ಸೃಷ್ಟಿಸುತ್ತದೆ. ಸಿಎಎ ಜಾರಿ ಮಾಡಿದ ಸಮಯದಲ್ಲೂ ಕಾಂಗ್ರೆಸ್ ಹೀಗೆ ಮಾಡಿತ್ತು ಎಂದು ಕಟೀಲ್ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಣ್ಣಗೆ ರೈತರ ಪರ ಮಾತಾಡುವ ನೈತಿಕ ಹಕ್ಕಿಲ್ಲ. ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಸಮಾಜವಾದದ ಹೆಸರಿನಲ್ಲಿ ಮಜಾ ಮಾಡಿದವ್ರು ಸಿದ್ದರಾಮಯ್ಯ. ಹಿಂದೆ ಜೈಲಿಂದ ಬಿಡುಗಡೆ ಆದಾಗ ಡಿಕೆಶಿ ಮೆರವಣಿಗೆ ಮೂಲಕ ಬಂದಿದ್ದರು. ಅವರು ಮತ್ತೆ ಅಲ್ಲಿಗೇ ಹೋಗ್ತಾರೆ ಎಂದು ಜಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.
ಇದನ್ನೂ ಓದಿ:ಮತ್ತೆ ಗಡಿಯ ಕಿಡಿ ಹೊತ್ತಿಸಲು 'ಮಹಾ' ಸರ್ಕಾರದ ಹುನ್ನಾರ: ಇಂದು ವಿವಾದಿತ ಪುಸ್ತಕ ಬಿಡುಗಡೆ ಮಾಡಲಿರುವ ಉದ್ಧವ್ ಠಾಕ್ರೆ