ಚಿತ್ರದುರ್ಗ: ಕೋಟೆನಾಡಿನಲ್ಲಿ ಪ್ರಭಾವಿ ಸಮುದಾಯವೊಂದು ಟಿಕೆಟ್ಗೆ ಸಂಬಂಧಪಟ್ಟಂತೆ ಬಿಜೆಪಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪನವರು ಆ ಸಮಾಜದ ಸ್ವಾಮೀಜಿಯವರನ್ನು ಮನಮೊಲಿಸಲು ಪ್ರಯತ್ನಿಸಿದರೂ, ಮನವೊಲಿಕೆ ಆಗದಿರುವುದು ಬಿಜೆಪಿ ನಾಯಕರಿಗೆ ಹಾಗೂ ಅಭ್ಯರ್ಥಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಹೌದು, ಲೋಕಸಭಾ ಟಿಕೆಟ್ಗೆ ಬೇಡಿಕೆ ಇಟ್ಟಿದ್ದ, ಭೋವಿ ಸಮುದಾಯಕ್ಕೆ ಟಿಕೆಟ್ ಕೈ ತಪ್ಪಿದ್ದಕ್ಕೆ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟಿಕೆಟ್ ಕೊಡಿಸುವುದಾಗಿ ಮಾತು ನೀಡಿದ್ದ ಬಿಎಸ್ವೈ ಮಾತು ತಪ್ಪಿದ್ದ ಬೆನ್ನಲ್ಲೆ ಬಿಜೆಪಿ ವಿರುದ್ಧ ಮತ ಚಲಾಯಿಸುವುದಾಗಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಖಡಕ್ ಸಂದೇಶ ರವಾನಿಸಿದ್ದಾರೆ.
ಭೋವಿ ಸಮುದಾಯಕ್ಕೆ ಟಿಕೆಟ್ ನೀಡದೆ ಮಾದಿಗ ಸಮುದಾಯದ ಆನೇಕಲ್ ನಾರಾಯಣ ಸ್ವಾಮಿಗೆ ಬಿ ಫಾರಂ ನೀಡಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಮುನಿಸಿಕೊಂಡಿರುವ ಭೋವಿ ಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ ಮನವೊಲಿಸಲು ಮುಂದಾಗಿದ್ದ ಬಿಎಸ್ವೈಗೆ ಮಠದ ಭಕ್ತರು ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ನೋಟಾ ಮತ ಚಲಾವಣೆ ಮಾಡುವುದಾಗಿ ಹೇಳಿದ್ದಾರೆ.
ಈ ವೇಳೆ ಭೋವಿ ಮತ್ತು ಬಂಜಾರ ಸಮುದಾಯದ ಜನರು ಯಡಿಯೂರಪ್ಪ ಮತ್ತು ಆನೇಕಲ್ ನಾರಾಯಣಸ್ವಾಮಿ ವಿರುದ್ಧ ಪ್ರತಿಭಟಿಸಿದ್ದು, ಮಠಕ್ಕೆ ಭೇಟಿ ನೀಡದಂತೆ ಅಡ್ಡಿ ಪಡಿಸುವ ಪ್ರಯತ್ನ ಕೂಡ ಮಾಡಿದ್ರು. ಕೊನೆ ಗಳಿಗೆಯಲ್ಲಿ ಶ್ರೀಗಳ ಭೇಟಿಗೆ ಅವಕಾಶ ಪಡೆದ ಯಡಿಯೂರಪ್ಪ, ಲೋಕಸಭೆ ಟಿಕೆಟ್ ಕೊಡಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಬಿಜೆಪಿ ವರಿಷ್ಠರ ತೀರ್ಮಾನದಿಂದಾಗಿ ಭೋವಿ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಮೂಲಕ ನನ್ನ ಮಾತಿಗೆ ಹೈಕಮಾಂಡ್ ಸೊಪ್ಪು ಹಾಕುತ್ತಿಲ್ಲ, ಎಂಬುದನ್ನ ಪರೋಕ್ಷವಾಗಿ ಒಪ್ಪಿಕೊಳ್ಳುವ ಮೂಲಕ ಸಿದ್ದರಾಮೇಶ್ವರ ಸ್ವಾಮೀಜಿ ಬಳಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ ಬಿಎಸ್ವೈ ಮನವೊಲಿಕೆಗೆ ಜಗ್ಗದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತ್ರ ಭೋವಿ, ಬಂಜಾರ ಸೇರಿದಂತೆ ಎಸ್ಸಿ ಮೀಸಲಾತಿಯಡಿ ಬರುವ ಇನ್ನಿತರ 99 ಸಮುದಾಯಗಳನ್ನ ಮೀಸಲಾತಿಯಿಂದ ಹೊರಗಿಡುವ ಪ್ರಯತ್ನ ಮಾಡಿದ್ದ, ಎ.ನಾರಾಯಣಸ್ವಾಮಿ ಅವರನ್ನ ಸೋಲಿಸಿಯೇ ತೀರುತ್ತೇವೆ ಎಂಬ ಸಂದೇಶವನ್ನ ಸಾರಿದರು.