ಚಿತ್ರದುರ್ಗ: ನಮ್ಮ ಸರ್ಕಾರಕ್ಕೆ ಯಾವ ರೀತಿ ಹೃದಯ ಇದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಕೇಳಬೇಕು ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.
ಕೊರೊನಾ ಸಮಯದಲ್ಲಿ ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ, ಹೃದಯಹೀನವಾಗಿ ನಡೆದುಕೊಳ್ಳುತ್ತಿದೆ ಎಂಬ ಡಿ. ಕೆ. ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರಕ್ಕೆ ಹೃದಯ, ಕಣ್ಣು, ಮೂಗು, ಬಾಯಿ, ಜೊತೆಗೆ ಕೆಲಸ ಮಾಡುವ ಮೆದುಳು ಇರುವುದರಿಂದ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದರು.
ಡಿಕೆಶಿಯವರು ಪ್ರಧಾನಿ ಸೇರಿದಂತೆ ಸಿಎಂ ಯಡಿಯೂರಪ್ಪ ನವರನ್ನು ಹೊಗಳಿದ್ರೇ ಕೆಪಿಸಿಸಿ ಸ್ಥಾನದಿಂದ ಇಳಿಸಿ ಬಿಡ್ತಾರೆ. ಹಾಗಾಗಿ ಅವರು ಈ ರೀತಿಯ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಬಿ ಸಿ ಪಾಟೀಲ್ ತಿರುಗೇಟು ನೀಡಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಸಚಿವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಕುಸಿತ ಕಂಡಾಗ ಇಂಧನ ಬೆಲೆ ಜಾಸ್ತಿಯಾಗಿದೆ ಎಂದು ಸಮರ್ಥಿಸಿಕೊಂಡರು. ಕೊರೊನಾ ಖರ್ಚು ವೆಚ್ಚದ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ ಸಿ ಪಾಟೀಲ್, ನಮ್ಮ ಸರ್ಕಾರ ಜನಪರ ಕೆಲಸ ಮಾಡ್ತಿದ್ದು, ಲೆಕ್ಕ ಪತ್ರ ಕೂಡ ಕೊಡ್ತಿವಿ ಎಂದ್ರು.
ಫುಡ್ ಕೋರ್ಟ್ ಅಭಿವೃದ್ಧಿ ಪಡಿಸಲು ಚಿಂತನೆ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರ ವಲಯದಲ್ಲಿರುವ ಫುಡ್ ಕೋರ್ಟ್ಅನ್ನು 2004 ರಲ್ಲಿ ನಿರ್ಮಾಣ ಮಾಡಲಾಗಿದ್ದು, ಇದೀಗ ಅಭಿವೃದ್ಧಿಪಡಿಸಲು ಮನವಿ ಕೂಡ ಬಂದಿವೆ. ಹಾಗಾಗಿ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಮೀಸಲಿಟ್ಟಿರುವ 10 ಸಾವಿರ ಕೋಟಿ ಹಣವನ್ನು ಸರ್ಕಾರ ಹಂತ ಹಂತವಾಗಿ ಬಳಸಿಕೊಂಡು ಫುಡ್ ಕೋರ್ಟ್ ಅಭಿವೃದ್ಧಿಪಡಿಸುತ್ತೇವೆ ಎಂದರು.