ಚಿತ್ರದುರ್ಗ: ಮೈತ್ರಿ ಸರ್ಕಾರ ಮಿಲಾವತ್ ಸರ್ಕಾರ ಎಂದು ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಸಮ್ಮಿಶ್ರ ಸರ್ಕಾರದ ವಿರುದ್ಧ ದೂರಿದರು.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯ ರೀತಿ ವರ್ತನೆ ಮಾಡದೇ ನಿಖಿಲ್ ಅವರ ತಂದೆಯಂತೆ ವರ್ತಿಸುತ್ತಿದ್ದಾರೆ. ಇದೊಂದು ಮಿಲಾವತ್ ಸರಕಾರ, ಈ ಸರ್ಕಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.
ಇನ್ನು ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಪಕ್ಷ ಕುಟುಂಬ ರಾಜಕಾರಣ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ಉತ್ತರ ಭಾರತದಲ್ಲಿ ಗಾಂಧಿ ಕುಟುಂಬ, ಕರ್ನಾಟಕದಲ್ಲಿ ದೇವೆಗೌಡ ಕುಟುಂಬ ರಾಜಕಾರಣ ಮಾಡುತ್ತಿದೆ. ಕುಟುಂಬ ರಾಜಕಾರಣಕ್ಕೆ ಜನ್ರು ತಕ್ಕ ಪಾಠಕಲಿಸುತ್ತಾರೆ. ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು ಮೊದಲು ಪಕ್ಷಕ್ಕೆ ಚೆನ್ನಾಗಿ ದುಡಿದು ಬಳಿಕ ರಾಜಕೀಯಕ್ಕೆ ಬರಬೇಕಾಗಿತ್ತು ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.
ಇಡೀ ಸಮ್ಮಿಶ್ರ ಸರ್ಕಾರ ಮಂಡ್ಯಕ್ಕೆ ಮಾತ್ರ ಮಹತ್ವ ನೀಡುತ್ತಿದೆ. ಲೋಕಸಭಾ ಚುನಾವಣೆ ಮಂಡ್ಯದಲ್ಲಿ ಮಾತ್ರ ನಡೆಯುತ್ತಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಅಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜಯಭೇರಿ ಭಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.