ಚಿತ್ರದುರ್ಗ: ಕಾಲೇಜೊಂದರ ಬೀಗ ಮುರಿದು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಶ್ರೀರಾಮಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜ.11 ರಂದು ಕಿಟ್ಟಿದಾಳ್ ಗ್ರಾಮದ ಸರ್ಕಾರಿ ಪಿಯು ಕಾಲೇಜ್ನ ಬೀಗ ಮುರಿದು ಅಂದಾಜು 93 ಸಾವಿರ ರೂ. ಮೌಲ್ಯದ ಟಿ.ವಿ., ಬ್ಯಾಟರಿಗಳ ಕಳ್ಳತನ ಮಾಡಲಾಗಿತ್ತು. ಈ ಕುರಿತು ಹೊಸದುರ್ಗ ತಾಲೂಕಿನ ಶ್ರೀರಾಪುರ ಪೊಲೀಸ್ ಠಾಣೆಯಲ್ಲಿ ಕಾಲೇಜು ಆಡಳಿತ ಮಂಡಳಿ ಪ್ರಕರಣ ದಾಖಲಿಸಿತ್ತು. ಬಳಿಕ ಪಿಎಸ್‌ಐ ನಾಗರಾಜ್ ನೇತೃತ್ವದ ತಂಡ ಪ್ರಕರಣವನ್ನು ಕೈಗೆತ್ತಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.
ಕಾಲೇಜಿನ ಪ್ರಾಂಶುಪಾಲ ಕುಮಾರಪ್ಪ ನೀಡಿದ ದೂರಿನ ಅನ್ವಯ, ಕಾಲೇಜಿನಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ ಕಿಟ್ಟಿದಾಳ್ ಗ್ರಾಮದ ಆರೋಪಿ ರಾಘವೇಂದ್ರ (31)ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಾಲೇಜಿನ ಟಿವಿ, 2 ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಆನಂದ್ ರಾವ್ ವೃತ್ತದ ಬಳಿ ಕಿಲ್ಲರ್ ಬಿಂಎಂಟಿಸಿ ಬಸ್ಗೆ ಭಿಕ್ಷುಕ ಬಲಿ
ಬಂಧಿತ ಆರೋಪಿ ರಾಘವೇಂದ್ರ ಹಿರಿಯೂರು ತಾಲೂಕಿನ ಕಂಪನಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸದ್ಯ ಪಿಎಸ್‌ಐ ನಾಗರಾಜ್ ನೇತೃತ್ವದ ತಂಡ ಬಂಧಿತನ ವಿಚಾರಣೆ ನಡೆಸುತ್ತಿದೆ.