ಚಿತ್ರದುರ್ಗ: ಮರಗಳಿಗೆ ಕೊಡಲಿ ಏಟು ಹಾಕುತ್ತಿರುವ ವಿಚಾರವಾಗಿ ಚಿತ್ರದುರ್ಗ ಶಾಸಕ ಹಾಗೂ ಪರಿಸರ ಪ್ರೇಮಿಯೊಬ್ಬನ ನಡುವೆ ನಡೆದಿರುವ ದೂರವಾಣಿ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಭಿವೃದ್ಧಿ ಕಾಮಗಾರಿಗಾಗಿ ನಗರದ ರಂಗಯ್ಯ ಬಾಗಿಲಿನಲ್ಲಿದ್ದ ನೂರಾರು ವರ್ಷಗಳ ಪುರಾತನ ಮರಗಳನ್ನು ಕಡಿದು ಹಾಕಲಾಗುತ್ತಿದೆ ಎಂದು ಆರೋಪಿಸಿ ಶಾಲಾ ಮಕ್ಕಳು ಹಾಗೂ ಪರಿಸರ ಪೇಮಿಗಳು ಈ ಹಿಂದೆ ವಾರವಿಡೀ ಹೋರಾಟ ನಡೆಸಿದ್ದರು. ಇಷ್ಟಾದರೂ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಜಿಲ್ಲಾಡಳಿತ ಆಲದ ಮರಗಳನ್ನ ಕಡಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಸಾಕಷ್ಟು ಚರ್ಚೆಗಳು ಕೂಡ ವ್ಯಕ್ತವಾಗಿದ್ದು, ಆಲದ ಮರ ಮುಂದೆಯೇ ನಿಂತು ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದರು.
ಇದಾದ ಬಳಿಕ ಪರಿಸರ ಪ್ರೇಮಿಯೊಬ್ಬರು ಶಾಸಕ ತಿಪ್ಪಾರೆಡ್ಡಿಗೆ ಪೋನ್ ಮಾಡಿ, ಆಲದ ಮರ ಕಡಿದು ಗುಡಿಸಿ ಗುಂಡಾಂತರ ಮಾಡಿದ್ರಾ? ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ, ಏ ಇಡೋ ಪೋನು, ಏ ಇಡೋ ಪೋನು ಎಂದು ಏಕವಚನದಲ್ಲಿ ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ. ಈ ಆಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ಇತಿಹಾಸ ಪ್ರಸಿದ್ಧ ಮರಗಳ ಮಾರಣ ಹೋಮಕ್ಕೆ ಚಿತ್ರದುರ್ಗ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.