ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಸರಸ್ವತಿಪುರಂ ಬಡಾವಣೆಯಲ್ಲಿ ಗೂಳಿಯೊಂದು ಅಲ್ಲಿನ ಜನರ ನೆಮ್ಮದಿ ಕಸಿದಿದೆ. ದಾರಿಹೋಕರ ಮೇಲೆ ಏಕಾಏಕಿ ದಾಳಿ ಮಾಡುವ ಮೂಲಕ ಹಲವರನ್ನು ಗಾಯಗೊಳಿಸಿದ ಘಟನೆಗಳು ನಡೆದಿವೆ.
ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡುತ್ತಿರುವ ಗೂಳಿಯಿಂದಾಗಿ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಗೂಳಿಯನ್ನು ಹಿಡಿದು ಕಟ್ಟಿಹಾಕಿಲ್ಲ. ಇದರಿಂದ ಜನರ ಮೇಲೆ ಗೂಳಿ ದಿನವೂ ದಾಳಿ ಮಾಡುತ್ತಿದ್ದು, ಜನರು ಪ್ರಾಣ ಭಯದಲ್ಲಿ ಓಡಾಡಬೇಕಿದೆ.
ಈ ಗೂಳಿಯು ಬಡಾವಣೆಯ ಸುಮಾರು 10ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಗೂಳಿ ಎರಗಿ ತನ್ನ ಕೊಬ್ಬುಗಳಿಂದ ತಿವಿಯುತ್ತಿರುವ ದೃಶ್ಯ ಬಡಾವಣೆಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೂಳಿಯ ಭಯದಿಂದಾಗಿ ಮಕ್ಕಳು ಶಾಲೆಗೆ ಹೋಗಲೂ ಹೆದರುತ್ತಿದ್ದಾರೆ. ಮಹಿಳೆಯರು ಮತ್ತು ವೃದ್ಧರಂತೂ ಮನೆಯಿಂದ ಹೊರಬರದಂತಾಗಿದ್ದಾರೆ. ಕೊಬ್ಬಿದ ಗೂಳಿಯನ್ನು ಕಟ್ಟಿ ಹಾಕಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಾರೆ.