ಚಿತ್ರದುರ್ಗ: ಕಾಡಂಚಿನಲ್ಲಿ ಬೇಟೆಯಾಡಲು ಬಂದಿದ್ದ ಆರು ಮಂದಿ ಬೇಟೆಗಾರರನ್ನು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿಯ ಅರಣ್ಯದಲ್ಲಿ ಪ್ರಾಣಿ ಬೇಟೆಗೆ ಬಂದಿದ್ದ ಬೇಟೆಗಾರರನ್ನು ಬಂಧಿಸಿದ್ದು, ಅವರನ್ನು ಈಶು, ಧುವನ್, ಪ್ರತಾಪ್, ರತ್ನಸ್ವಾಮಿ, ವಿನೋದ್, ಸಹದೇವ್ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹಿರಿಯೂರು ವಲಯ ಅರಣ್ಯಾಧಿಕಾರಿಗಳಾದ ಶ್ರೀಹರ್ಷ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದು, ಪೊಲೀಸರ ಸಹಾಯದಿಂದ ದಾಳಿ ನಡೆಸಿ ಬೇಟೆಗಾರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಟೆಗಾರರಿಂದ ಅತ್ಯಾಧುನಿಕ ನಾಲ್ಕು ಬಂದೂಕುಗಳು, ಒಂದು ಪಿಸ್ತೂಲ್, ಫ್ಲ್ಯಾಷ್ ಲೈಟ್, ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು ಹಾಗೂ ಬೇಟೆಯಾಡಲು ಉಪಯೋಗಿಸುತ್ತಿದ್ದ 3 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.