ಚಿತ್ರದುರ್ಗ: ಕಾರ್ಮಿಕ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಇತರ ಕಾರ್ಮಿಕರಿಗೆ ಆಹಾರ ಪದಾರ್ಥಗಳ 4 ಸಾವಿರ ಕಿಟ್ಗಳನ್ನು ವಿತರಣೆ ಮಾಡಲಾಯಿತು.
ಮಹಿಳೆಯರಿಗೆ ಕಿಟ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಸೇರಿದ್ದ ಜನ, ಸಾಮಾಜಿಕ ಅಂತರ ಲೆಕ್ಕಿಸದೆ ಕಿಟ್ ಪಡೆಯಲು ಗುಂಪಾಗಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಅಮೆರಿಕ ದೇಶದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿ ಬಳಿಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಕೊರೊನಾ ಅಂಕಿ-ಸಂಖ್ಯೆ ಇಳಿಮುಖ ಆಗುತ್ತಿರುವುದು ನಮ್ಮ ಅದೃಷ್ಟ. ನಮ್ಮ ಚಿತ್ರದುರ್ಗ ಕ್ಷೇತ್ರಕ್ಕೆ ನಾಲ್ಕು ಸಾವಿರ ಆಹಾರ ಕಿಟ್ಗಳು ಬಂದಿದ್ದು, ಅದರಲ್ಲಿ ಮಹಿಳಾ ಕಾರ್ಮಿಕ ಸಂಘಟನೆಯ ಮಹಿಳೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಪೌರಕಾರ್ಮಿಕರಿಗೆ ನೀಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಕೆಲ ಕಾಲ ನಗೆ ಚಟಾಕಿ ಹಾರಿಸಿದ ಶಾಸಕರು:
ಕಿಟ್ನಲ್ಲಿ ಏನ್ಐತಿ ನೋಡಿಲ್ಲ ನಾನು. ಏನ್ ಐತ್ರಪ್ಪೋ ಅದರಲ್ಲಿ ಓಪನ್ ಮಾಡಿ ನೋಡಿದ್ರಾ, ಕಾಟ್ರ್ಯಾಕ್ಟ್ನವನು ಏನ್ ಕೊಟ್ಟಿದ್ದಾನೋ, ಏನ್ ಸಪ್ಲೈ ಮಾಡಿದ್ದಾನೋ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು. ಇನ್ನು ವೇದಿಕೆ ಮುಂದೆ ಕೂತಿದ್ದ ಮಹಿಳೆಗೆ ಫೋನ್ ಆಫ್ ಮಾಡಮ್ಮಾ ತಾಯಿ, ಫೋನ್ ಇದ್ರೆ ಕಿಟ್ ಕೊಡಲ್ಲ ನೋಡು ಎಂದು ರೇಗಿಸಿದರು.
ಬಳಿಕ ಬಿ.ಎಸ್.ಯಡಿಯೂರಪ್ಪನವರ ಸರ್ಕಾರದ ಬಗ್ಗೆ ಗುಣಗಾನ ಮಾಡಲು ನಿಂತ ಶಾಸಕರು, ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ್ರನ್ನು ಹಾಡಿ ಹೊಗಳಿದರು.