ಚಿತ್ರದುರ್ಗ: ದಿನದ 24 ಗಂಟೆಗಳ ಕಾಲ ಮನೆಗೆ ವಿದ್ಯುತ್ ಬಳಸಿದರೂ 1 ಸಾವಿರದಿಂದ 2 ಸಾವಿರ ಕರೆಂಟ್ ಬಿಲ್ ಬರುವುದು ಕಾಮನ್. ಆದರೆ, ನಗರದ ವಿದ್ಯಾನಗರ ಬಡಾವಣೆ ನಿವಾಸಿ ಪದ್ಮಾವತಿ ಎನ್ನುವವರ ಮನೆಯ ಕರೆಂಟ್ ಬಿಲ್ ಒಂದೇ ತಿಂಗಳಿಗೆ ಬರೋಬ್ಬರಿ 21 ಸಾವಿರ ಬಂದಿದ್ದು, ಬೆಸ್ಕಾಂ ಕಂಪನಿಯಿಂದ ಅನ್ಯಾಯವಾಗಿದೆ ಎಂದು ನ್ಯಾಯಾಲಯ ಮೊರೆ ಹೋಗಲು ಮನೆಯವರು ಮುಂದಾಗಿದ್ದಾರೆ.
ಮನೆಯಲ್ಲಿ ಮೂರು ಜನ ಸದಸ್ಯರು ವಾಸವಿದ್ದಾರೆ. ಆದರೆ ಇವರಿಗೆ ಹೆಚ್ಚಿನ ಬಿಲ್ ಬಂದಿದೆ. ಇತ್ತ ಕಡಿಮೆ ವಿದ್ಯುತ್ ಬಳಸಿದರೂ ದುಬಾರಿ ಬಿಲ್ ನೀಡಿದ್ದಾರೆ. ಪ್ರತಿ ತಿಂಗಳು ಎಷ್ಟೇ ವಿದ್ಯುತ್ ಬಳಕೆ ಮಾಡಿದರೂ ಗರಿಷ್ಠ 3 ಸಾವಿರ ಕರೆಂಟ್ ಬಿಲ್ ಬರುತ್ತದೆ. ಬೆಸ್ಕಾಂ ಅಧಿಕಾರಿಗಳು ಏಕಾಏಕಿಯಾಗಿ ಆಗಸ್ಟ್ ತಿಂಗಳು 21 ಸಾವಿರ ವಿದ್ಯುತ್ ಬಿಲ್ ನೀಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಮೀಟರ್ ನೋಡದೇ ಅಧಿಕಾರಿಗಳು ಬಿಲ್ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಹೆಚ್ಚಿನ ಬಿಲ್ ಬರಲು ಕಾರಣವಾಗಿದ್ದು, ಇತ್ತ ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಕಟ್ಟಿ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪದ್ಮಾವತಿ ವಾಸ ಮಾಡುವ ಮನೆ ಬಾಡಿಗೆ ಮನೆಯಾಗಿದೆ. ಶಾರದಮ್ಮ, ಸತೀಶ್ ಎಂಬವರಿಗೆ ಸೇರಿದ ಮನೆ ಇದಾಗಿದೆ.
ಕಳೆದ ಆಗಸ್ಟ್ ತಿಂಗಳಿಗೆ 21 ಸಾವಿರ ವಿದ್ಯುತ್ ಬಿಲ್ ನೀಡಿರುವುದು ನಗರ ನಿವಾಸಿಗಳ ಅಚ್ಚರಿಗೂ ಕಾರಣವಾಗಿದೆ. ಇತ್ತ ಪದ್ಮಾವತಿ ಅವರು, ಬೆಸ್ಕಾಂ ಅಧಿಕಾರಿಗಳಿಗೆ ಕರೆಂಟ್ ಬಿಲ್ ಹೆಚ್ಚಿಗೆ ಬಂದಿರುವುದರ ಕುರಿತು ಲಿಖಿತವಾಗಿ ಮಾಹಿತಿ ಕೇಳಿದ್ದರಂತೆ. ಆದರೆ, ಬೆಸ್ಕಾಂ ಸಿಬ್ಬಂದಿಗಳು ಇದರಲ್ಲಿ ಯಾವುದೇ ಲೋಪದೋಷವಿಲ್ಲ, ಬಿಲ್ ಕಟ್ಟಿ ಎಂದು ಸೂಚಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಓದಿ : ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭ; ಜಸ್ಟ್ 10 ರೂ.ನಲ್ಲಿ ಏರ್ಪೋರ್ಟ್ ತಲುಪಿ!!
2020ರ ಆಗಸ್ಟ್ ತಿಂಗಳಲ್ಲಿ ಮಾತ್ರ ಹೆಚ್ಚಿಗೆ ಬಿಲ್ ಬಂದಿದೆ. ಬಳಿಕ ಪ್ರತಿ ತಿಂಗಳು 1500 ರೂ ಮಾತ್ರ ಕರೆಂಟ್ ಬಿಲ್ ಬಂದಿದೆ. ಒಂದು ತಿಂಗಳಲ್ಲಿ ಅಷ್ಟು ಬಿಲ್ ಹೇಗೆ ಎಂಬ ಕುಟುಂಬಸ್ಥರ ಪ್ರಶ್ನೆಯಾಗಿದೆ. ಇತ್ತ ಅಧಿಕಾರಿಗಳ ಎಡವಟ್ಟಿನಿಂದ ಬಿಲ್ ಹೆಚ್ಚಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಪದ್ಮಾವತಿ ಕುಟುಂಬಸ್ಥರು ಹೇಳುತ್ತಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಅಧಿಕಾರಿಗಳು: ಕಳೆದ ಎರಡು ಮೂರು ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂದು, 20 ದಿನಗಳ ಹಿಂದೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂತೆ. ಬಿಲ್ ಪಾವತಿಸಿದ ಬಳಿಕ ವಿದ್ಯುತ್ ಸಂಪರ್ಕ ಮರು ಆರಂಭಿಸುವುದಾಗಿ ಬೆಸ್ಕಾಂ ಸಿಬ್ಬಂದಿ ಕುಟುಂಬಸ್ಥರಿಗೆ ಹೇಳಿದ್ದಾರಂತೆ.
ಈ ಕುರಿತು ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಲಾಕ್ ಡೌನ್ ಸಮಯದಲ್ಲಿ ಮನೆಯೊಳಗೆ ಮೀಟರ್ ಬೋರ್ಡ್ ಇತ್ತು. ಕುಟುಂಬಸ್ಥರು ಮೀಟರ್ ನೋಡಲು ಸಹಕರಿಸಲಿಲ್ಲ. ಬಳಿಕ ಅವರೇ ಒಂದು ನಂಬರ್ ಕೊಟ್ಟರು, ಆ ನಂಬರ್ ಮೇಲೆ ನಾವು ಬಿಲ್ ಮಾಡಿದ್ದೇವೆ. ಆಗಸ್ಟ್ ತಿಂಗಳು ಮಾತ್ರ ಪದ್ಮಾವತಿ ಕುಟುಂಬಸ್ಥರು ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಾರೆ. ಅಷ್ಟು ಪ್ರಮಾಣದ ವಿದ್ಯುತ್ ಬಳಕೆ ಮಾಡಿದ್ದಕ್ಕೆ 21 ಸಾವಿರ ಬಿಲ್ ಬಂದಿದೆ. ವಿದ್ಯುತ್ ಮೀಟರ್ ನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ. ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.