ಚಿತ್ರದುರ್ಗ: ಉತ್ತರ ಪ್ರದೇಶ ಮೂಲದ 20 ಕಾರ್ಮಿಕರಲ್ಲಿಂದು ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು ಕೊರೊನಾ ಬಾಂಬ್ ಸ್ಫೋಟವಾದಂತಾಗಿದ್ದು, ಸೋಂಕಿತರ ಸಂಖ್ಯೆ ಏಕಾಏಕಿ 10ರಿಂದ 30ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಚಳ್ಳಕೆರೆ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದ ಉತ್ತರ ಪ್ರದೇಶ ಮೂಲದ 57 ಕಾರ್ಮಿಕರ ಪೈಕಿ 20 ಕಾರ್ಮಿಕರಿಗೆ ಸೋಂಕು ತಗುಲಿದೆ. ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಚಳ್ಳಕೆರೆಯ ಚೆಕ್ ಪೋಸ್ಟ್ನಲ್ಲಿ ಈ ಕಾರ್ಮಿಕರನ್ನು ಪೊಲೀಸರು ತಡೆದು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿದ್ದರು. ಇದೇ ಗುಂಪಿನ 25 ವರ್ಷದ ಯುವಕನೋರ್ವನಿಗೆ ಮೇ 22ರಂದು ಸೋಂಕು ದೃಢಪಟ್ಟಿತ್ತು. ಈ ಯುವಕನೊಂದಿಗೆ ಸಂಪರ್ಕದಲ್ಲಿದ್ದ ಅಂದರೆ ತಮಿಳುನಾಡಿನಿಂದ ಒಂದೇ ಲಾರಿಯಲ್ಲಿ 57 ಜನ ಕಾರ್ಮಿಕರು ಆಗಮಿಸಿದ್ದವರನ್ನೂ ಸಹ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ಒಟ್ಟು 57 ಕಾರ್ಮಿಕರನ್ನು ಅಧಿಕಾರಿಗಳು ಚಳ್ಳಕೆರೆ ಪಟ್ಟಣದ ಆದರ್ಶ ವಿದ್ಯಾಲಯ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಿದ್ದರು. ಈ 57 ಜನ ಕಾರ್ಮಿಕರ ಪೈಕಿ 20 ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತ ವರದಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 30 ಕೊರೊನಾ ಪ್ರಕರಣಗಳಲ್ಲಿ 5 ಜನ ಗುಣಮುಖರಾಗಿದ್ದು, 25 ಸಕ್ರಿಯ ಪ್ರಕರಣಗಳಿವೆ.