ಚಿಕ್ಕಮಗಳೂರು/ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್‌ವಿ ದತ್ತ ಅವರಿಗೆ ಕಡೂರು ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆಗೆ ಚಿಂತನೆ ನಡೆಸುತ್ತಿರುವ ಅವರು, ಅಭಿಮಾನಿಗಳಿಗೆ ಪತ್ರ ಬರೆದಿದ್ದು, ನಿಮ್ಮ ಜೊತೆಗೆ ನಾನಿರಬೇಕು, ನನ್ನ ಜೊತೆಗೆ ನೀವಿರಬೇಕು ಎಂಬುದು ಅನಿವಾರ್ಯವಾಗಿದೆ. ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ದತ್ತಣ್ಣ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ ಎಂದಿದ್ದಾರೆ.
ಏ.9 ರಂದು ಅಭಿಮಾನಿಗಳ ಸಭೆಯನ್ನೂ ಕರೆದಿದ್ದಾರೆ. ಈ ವೇಳೆ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ. ಪತ್ರದಲ್ಲಿ ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.
ಟಿಕೆಟ್ ಕೈ ತಪ್ಪಿ ಅಸಮಾಧಾನಗೊಂಡಿರುವ ದತ್ತಾರನ್ನು ಮರಳಿ ಜೆಡಿಎಸ್ಗೆ ಕರೆತರಲು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹೆಚ್.ಡಿ.ದೇವೇಗೌಡ ಅಥವಾ ಕುಮಾರಸ್ವಾಮಿ ಆಹ್ವಾನ ನೀಡಿದ್ದಲ್ಲಿ ಮಾತ್ರ ಜೆಡಿಎಸ್ ಕಡೆಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವೈಎಸ್‌ವಿದತ್ತಾ ಯಾರೋ ನನಗೆ ಗೊತ್ತಿಲ್ಲ- ಹೆಚ್‌ಡಿಕೆ: ಶುಕ್ರವಾರ ಕಡೂರು ತಾಲೂಕಿನಲ್ಲಿ ಪಂಚರತ್ನ ಯಾತ್ರೆ ನಡೆಸಿದ ಕುಮಾರಸ್ವಾಮಿ, ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ ಪರವಾಗಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಕಡೂರು ತಾಲೂಕಿನ ಬೀರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವೈಎಸ್‌ವಿ ದತ್ತಾ ಬಗ್ಗೆ ಪ್ರತಿಕ್ರಿಯಿಸಿ ಅವರು ಯಾರೋ ನನಗೆ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ನನ್ನದು ಸಣ್ಣ ಪಕ್ಷ, ಅವರೇಕೆ ಬರುತ್ತಾರೆ. ಅವರು ಇಂಟರ್ ನ್ಯಾಷನಲ್ ಪಕ್ಷ ಸೇರಲು ಹೊರಟಿರುವವರು. ನನ್ನ ಪಕ್ಷದಲ್ಲಿ ಪಾಪ ಅವರಿಗೆ ಏನು ಸಿಗುತ್ತೆ. ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ವ್ಯಂಗ್ಯವಾಡಿದರು.
ನಂತರ ಹಾಸನ ಟಿಕೆಟ್ ವಿಚಾರದ ಕುರಿತು ಮಾತನಾಡಿ, ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕಿದೆ ಎಂದು ಹೇಳಿದರು.
ಪಕ್ಷೇತರವಾಗಿ ಸ್ಪರ್ಧಿಸುವಂತೆ ದತ್ತಾಗೆ ಬೆಂಬಲಿಗರ ಮನವಿ: ವೈ.ಎಸ್.ವಿ.ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ದತ್ತಾ ಮನೆಯಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುವಂತೆಯೂ ಮನವಿ ಮಾಡಿದ್ದಾರೆ.
ವೈ.ಎಸ್.ವಿ.ದತ್ತಾ ಕಳೆದ ಮೂರ್ನಾಲ್ಕು ದಶಕಗಳ ಜೆಡಿಎಸ್ ಸಂಬಂಧ ಕಳೆದುಕೊಂಡು ಕಳೆದ ಎರಡು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಸೇರಿದ್ದರು. ಪಕ್ಷ ಸೇರುತ್ತಿದ್ದಂತೆ ಅಭಿಮಾನಿಗಳಲ್ಲಿ ಕಾಂಗ್ರೆಸ್ ಟಿಕೆಟ್ ಭರವಸೆ ಮೂಡಿಸಿತ್ತು. ಆದರೀಗ ಟಿಕೆಟ್ ಕೈ ತಪ್ಪಿದೆ.
ಇದನ್ನೂ ಓದಿ:ಸಿಗದ ಕಾಂಗ್ರೆಸ್ ಟಿಕೆಟ್; ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದ ಹರಪಳ್ಳಿ ರವೀಂದ್ರ