ಚಿಕ್ಕಮಗಳೂರು : ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಸ್ನಿಂದ ಕೆಳಗೆ ಬಿದ್ದು ರಕ್ಷಿತಾ ಎಂಬ ಯುವತಿ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಹೀಗಾಗಿ ಪೋಷಕರು ತಮ್ಮ ಮಗಳ ಅಂಗಾಗ ದಾನಕ್ಕೆ ಮುಂದಾಗಿದ್ದಾರೆ.
ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡಾದ ರಕ್ಷಿತಾ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಸ್ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತಾಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯ ತಂದೆ - ತಾಯಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು.
ಮಗಳ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು: ಆಸ್ಪತ್ರೆಗೆ ಭೇಟಿ ನೀಡಿ ಮಗಳನ್ನು ನೋಡಿದ ತಾಯಿ ಲಕ್ಷ್ಮಿ ಬಾಯಿ ಮತ್ತು ತಂದೆ ಸುರೇಶ್ ನಾಯಕ್ ಆಘಾತಕ್ಕೊಳಗಾದರು. ಬಳಿಕ ವೈದ್ಯರು ನಿಮ್ಮ ಮಗಳ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದಾಗ ಅವರ ಆಕ್ರಂದನ ಮುಗಿಲು ಮುಟ್ಟಿತು. ಬಳಿಕ ಮಗಳ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದರು.
ನಮ್ಮ ಮಗಳು ಇನ್ನು ನಾಲ್ಕು ದಿನ ನಮ್ಮೊಂದಿಗೆ ಇದ್ದಂತಾಗುತ್ತದೆ: ನಮ್ಮ ಮಗಳನ್ನು ನಾವು ಕೂಲಿ ಕೆಲಸ ಮಾಡಿಕೊಂಡು ಓದಿಸುತ್ತಿದ್ದೇವೆ. ಭಾನುವಾರ ಏನಾಯ್ತೋ ಏನೋ ಗೊತ್ತಾಗ್ಲಿಲ್ಲ. ನಾನು ನನ್ನ ಗಂಡ ಕೂಲಿ ಕೆಲಸಕ್ಕೆ ತೆರಳಿದ್ದಾಗ ನಮಗೆ ಫೋನ್ ಬಂತು. ನಾವು ಆಸ್ಪತ್ರೆಗೆ ಬಂದು ನೋಡಿದಾಗ ಮಗುಗೆ ಈ ರೀತಿ ಆಗಿತ್ತು.
ಮುಂದೇ ಈ ರೀತಿ ಯಾವ ಮಕ್ಕಳಿಗೂ ಆಗಬಾರದು. ಚಾಲಕರು ಮತ್ತು ನಿರ್ವಾಹಕರು ಎಚ್ಚರಿಕೆಯಿಂದ ವಾಹನ ಚಲಿಸಬೇಕು. ಈ ಘಟನೆಯಾದ ಬಳಿಕ ಅವಳು ನಮ್ಮ ಜೊತೆ ಮಾತನಾಡಿಯೇ ಇಲ್ಲ. ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ಮಗಳಿಂದ ನಾಲ್ಕು ಜನಕ್ಕೆ ಒಳ್ಳೆದಾಗಲಿ ಅಂತಾ ನಾವು ಅಂಗಾಗ ದಾನಕ್ಕೆ ಮುಂದಾಗಿದ್ದೇವೆ.
ನಮ್ಮ ಮಗಳು ಸತ್ತೊದ್ಲು ಅಂತಾ ಕೊರಗುವುದಕ್ಕಿಂತ ಎಲ್ಲೊ ಒಂದು ಕಡೆ ಜೀವಂತವಾಗಿದ್ದಾಳೆ ಎಂದು ನಾವು ತಿಳಿದುಕೊಳ್ಳುತ್ತೇವೆ. ನಮಗೆ ನಮ್ಮ ಮಗಳು ಸಾಯಿಬಾರದು. ಇನ್ನು ನಾಲ್ಕು ದಿನ ಬದಕುಬೇಕು ಎಂಬುದು ತಾಯಿ ಲಕ್ಷ್ಮಿ ಬಾಯಿಯ ಮಾತು.
ಹೆಲಿಕಾಪ್ಟರ್ನಲ್ಲಿ ಅಂಗಾಂಗ ರವಾನೆ: ಸದ್ಯ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ರಕ್ಷಿತಾ ನಾಯಕ್ ಇದ್ದು, ಇಂದು ಸಂಜೆ ಚಿಕ್ಕಮಗಳೂರಿಗೆ ವೈದ್ಯರ ತಂಡ ಆಗಮಿಸಲಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಎರಡು ಹೆಲಿಕ್ಯಾಪ್ಟರ್ನಲ್ಲಿ ಅಂಗಾಂಗ ರವಾನೆ ಮಾಡಲಾಗುತ್ತಿದೆ.
ಓದಿ: ಅಂಗಾಂಗ ದಾನ ಮಾಡಿ ಮೂವರಿಗೆ ಬದುಕು ಕೊಟ್ಟು ಇಹಲೋಕ ತ್ಯಜಿಸಿದ ಯುವಕ