ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಗುತ್ತಿ ಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಯಾ (32) ಎಂಬುವವರ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿ ಗಂಭೀರ ಗಾಯಗಳಾಗಿದ್ದು, ಮಹಿಳೆ ಸ್ಥಳದಲ್ಲಿಯೇ ಅಸ್ವಸ್ಥಳಾಗಿದ್ದಾಳೆ. ಇದನ್ನು ಗಮನಿಸಿದ ಕಾರ್ಮಿಕರು ಕೂಡಲೇ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ವತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಆನೆ ದಾಳಿಯಿಂದ ಮಹಿಳೆಯ ಪಕ್ಕೆಲುಬು, ಹೊಟ್ಟೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ವತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮಹಿಳೆ ಸಾವನ್ನಪ್ಪಿದ್ದು, ಗುತ್ತಿ ಗ್ರಾಮದ ಜನರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಹಲವಾರು ಬಾರಿ ಗುತ್ತಿ ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ್ದು, ಅರಣ್ಯ ಇಲಾಖೆ ಕಣ್ಣುಚ್ಚಿ ಕುಳಿತಂತಿದೆ. ಈ ಕುರಿತು ಹಲವು ಸಲ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನಲಾಗಿದೆ.