ಚಿಕ್ಕಮಗಳೂರು/ಶಿವಮೊಗ್ಗ: ಕಾಫಿನಾಡು ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ದಿಢೀರ್ ಮಳೆ ಸುರಿಯುತ್ತಿದ್ದು, ಬೇಸಿಗೆಯ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಇಡಕಣಿ, ಹಿರೇಬೈಲು, ಮರಸಣಿಗೆ, ಬಾಳೆಹೊಳೆ ಹಾಗೂ ಶಿವಮೊಗ್ಗದ ಸಾಗರ ಪಟ್ಟಣ ಸೇರಿದಂತೆ ಕುಂಸಿ, ಚೋರಡಿ, ಆನಂದಪುರಂ ಭಾಗದಲ್ಲಿ ಮಳೆಯಾಗಿದೆ. ಕಳೆದೊಂದು ವರ್ಷದಿಂದ ಆಗಾಗ್ಗೆ ನಿರಂತರವಾಗಿ ಅಕಾಲಿಕ ಮಳೆ ಸುರಿಯುತ್ತಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಮಲೆನಾಡು ಭಾಗದಲ್ಲಿ ಕಾಫಿ ಕಟಾವು ಇನ್ನೂ ಮುಂದುವರೆದಿದ್ದು, ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ನೂರಾರು ಕೋಟಿ ರೂ. ನಷ್ಟವುಂಟಾಗಿತ್ತು. ಈಗ ಮತ್ತೆ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಮತ್ತೇನು ಅನಾಹುತ ಆಗುತ್ತೋ ಎಂದು ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.