ಚಿಕ್ಕಮಗಳೂರು: ಮುಳ್ಳು ಹಂದಿ ಇದ್ದ ಸುರಂಗದೊಳಗೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮುಳ್ಳು ಹಂದಿ ಶಿಕಾರಿ ಮಾಡಲು ಹೋಗಿ ಸುರಂಗದ ಒಳಗೆ ಇಬ್ಬರು ತೆರಳಿದ ಪರಿಣಾಮ ಉಸಿರಾಟದ ಸಮಸ್ಯೆಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಸೋಮವಾರ ನಡೆದಿದೆ.
ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಈ ಘಟನೆಯಿಂದ ಸಾವನ್ನಪ್ಪಿದ್ದಾರೆ. ತಮಿಳುನಾಡು ಮೂಲದ ವಿಜಯ್ (28), ಶರತ್(26) ಸಾವನ್ನಪ್ಪಿದ ಕೂಲಿ ಕಾರ್ಮಿಕರು. ಕಾಳು ಮೆಣಸು ಕುಯ್ಯಲು ಬಂದಿದ್ದ ಈ ಕಾರ್ಮಿಕರು ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದ ವೇಳೆ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.
ಸುರಂಗದ ಒಳಗೆ ಉಸಿರಾಡದೇ ಸಾವು: ಸುರಂಗದ ಒಳದೊಳಗೆ ಹೊಗೆ ಹಾಕಿ ಇಬ್ಬರು ಅದರ ಒಳಗೆ ನುಗ್ಗಿದ ಪರಿಣಾಮ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಸ್ಥಳಕ್ಕೆ ಬಾಳೂರು ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್, ಪೊಲೀಸರು ಮತ್ತು ಸ್ಥಳೀಯರು ಗುಹೆಯೊಳಗೆ ತೆರಳಿ ಮೃತದೇಹ ಹೊರ ತೆಗೆದಿದ್ದಾರೆ. ಮೂಡಿಗೆರೆ ತಾಲೂಕಿ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಮಗಳನ್ನು ಕಾಡು ಹಂದಿಯಿಂದ ರಕ್ಷಿಸಲು ಪ್ರಾಣತೆತ್ತ ತಾಯಿ: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಭಾನುವಾರ ತಾಯಿ ದುವಾಶಿಯಾ ಬಾಯಿ ಮತ್ತು ಆಕೆಯ ಪುತ್ರಿ ರಿಂಕಿ ಮಣ್ಣು ತರಲು ಹತ್ತಿರದ ಜಮೀನಿಗೆ ತೆರಳಿದ್ದರು. ತಾಯಿ ಕೊಡಲಿಯಿಂದ ಮಣ್ಣು ಅಗೆಯುವ ಕೆಲಸದಲ್ಲಿ ನಿರತರಾಗಿದ್ದಾಗ, ಇವರಿದ್ದ ಗದ್ದೆಗೆ ಕಾಡು ಹಂದಿಯೊಂದು ಬಂದಿದ್ದು ಏಕಾಏಕಿ ಮಗಳು ರಿಂಕಿ ಬಳಿ ನುಗ್ಗಿದೆ.
ಹೀಗಾಗಿ ಮಗಳನ್ನು ಬದುಕಿಸಲು ತಾಯಿ ದುವಾಶಿಯಾ ಕೊಡಲಿಯೊಂದಿಗೆ ಕಾಡು ಹಂದಿಯ ಜೊತೆ ಫೈಟ್ ಮಾಡಿದ್ದಲ್ಲದೆ ಯಶಸ್ವಿಯಾಗಿ ಅದನ್ನು ಕೊಂದಿದ್ದಾಳೆ. ಆದರೆ ಈ ಹೋರಾಟದಲ್ಲಿ ದುವಾಶಿಯಾ ಗಂಭೀರ ಗಾಯಗೊಂಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ಮಗಳು ರಿಂಕಿಗೆ ಯಾವುದೇ ಹಾನಿಯಾಗಿಲ್ಲ. ಇನ್ನು ಈ ಘಟನೆಯು ಪಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೆಲಿಯಮಾರ್ ಗ್ರಾಮದಲ್ಲಿ ನಡೆದಿದೆ ಎಂದು ಘಟನೆಯ ಕುರಿತು ಪಸನ್ ಅರಣ್ಯ ಅಧಿಕಾರಿ ರಾಮನಿವಾಸ್ ದಹಾಯತ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುಟ್ಟ ಮಗಳ ರಕ್ಷಣೆಗೆ ಕಾಡುಹಂದಿ ಜೊತೆ ಹೋರಾಡಿ ಪ್ರಾಣತೆತ್ತ ಧೈರ್ಯಶಾಲಿ ಮಹಿಳೆ