ಚಿಕ್ಕಮಗಳೂರು: ಎರಡ್ಮೂರು ಅಡಿ ದೂರದಲ್ಲಿರೋರೆ ಕಾಣದಂತಹ ಮಂಜು. ಜೊತೆಗೊಬ್ಬರು ಇರದಿದ್ರೆ ಗಾಳಿ ನಮ್ಮನ್ನ ಕೊಂಡೊಯ್ಯುತ್ತೇನೋ ಎಂದು ಭಯ ಹುಟ್ಟಿಸುವ ಗಾಳಿ. ಕೊರೊನಾವನ್ನು ಹಬ್ಬಿಸೋಕೆ ಬಂದವರಂತೆ ಕಾಣೋ ಪ್ರವಾಸಿಗರು. ಕಾಫಿನಾಡಿಗರು ಹಾಗೂ ಪ್ರವಾಸಿಗರಿಗೆ ಇಲ್ಲಿನ ಸೌಂದರ್ಯವೇ ಮಗ್ಗಲ ಮುಳ್ಳಾಗಿದೆ. ಕೊರೊನಾ ಹರಡಿಸುವ ತಾಣವಾದಂತೆ ಕಾಣಿಸುತ್ತಿದೆ.
ಹೌದು ಇದು ಕಾಫಿನಾಡಿನ ಮುಳ್ಳಯ್ಯನಗಿರಿ ಬೆಟ್ಟದ ಸ್ಥಿತಿ. ಇಲ್ಲಿಗೆ ಬರುವವರಲ್ಲಿ ಮುಖಕ್ಕೆ ಮಾಸ್ಕ್ ಹಾಕಿದವರಿಗಿಂತ ಹಾಕದವರೇ ಹೆಚ್ಚು. ಸರ್ಕಾರ ಕಳೆದ ಏಳೆಂಟು ತಿಂಗಳಿಂದ ಮಾಸ್ಕ್ ಹಾಕಿ ಅಂತ ಗಂಟಲು ಕಿತ್ತು ಹೋಗುವಂತೆ ಕೂಗುತ್ತಿದೆ. ಆದರೆ, ಪ್ರವಾಸಿಗರು ಸರ್ಕಾರದ ಆದೇಶವನ್ನಾಗಲಿ ನಮ್ಮ ಮನವಿಗಾಗಲಿ ಕ್ಯಾರೇ ಅಂತಿಲ್ಲ. ಕಳೆದ ಎರಡು ದಿನಗಳಿಂದ ಮುಳ್ಳಯ್ಯನಗಿರಿಗೆ 1,770 ಕಾರುಗಳು, 726 ಬೈಕ್‍ಗಳು ಹಾಗೂ 122 ಟಿಟಿ ಹಾಗೂ ಮಿನಿ ಬಸ್‍ನಲ್ಲಿ ಪ್ರವಾಸಿಗರು ಬಂದಿದ್ದಾರೆ. ಆದರೆ, ಮಾಸ್ಕ್ ಹಾಕಿದವರು ಬೆರಳೆಣಿಕೆಯಷ್ಟು ಜನ ಮಾತ್ರ. ಪ್ರವಾಸಿಗರ ಈ ವರ್ತನೆ ಮಾಸ್ಕ್ ಹಾಕೋ ಪ್ರವಾಸಿಗರು ಹಾಗೂ ಸ್ಥಳಿಯರಿಗೂ ಕೂಡ ಕಿರಿ - ಕಿರಿ ಉಂಟುಮಾಡಿದೆ. ಜಿಲ್ಲೆಯ ಜನರಿಗೆ ಕಾಫಿನಾಡಿನ ಈ ಸೌಂದರ್ಯವೇ ಸದ್ಯಕ್ಕೆ ಶಾಪವಾಗಿ ಪರಿಣಮಿಸಿದೆ.
ಪ್ರವಾಸಿಗರ ವರ್ತನೆಯಿಂದ ಬೇಸತ್ತ ಕೆಲ ಪ್ರವಾಸಿಗರು ಹಾಗೂ ಸ್ಥಳೀಯರು ಸರ್ಕಾರದ ವಿರುದ್ಧ ಕೂಡ ತಮ್ಮ ಅಸಮಾಧಾನ ತೋರಿದ್ದಾರೆ. ಇಲ್ಲಿಗೆ ಬರೋರು ಎಲ್ಲ ಪ್ರವಾಸಿಗರು ಬೇರೆ-ಬೇರೆ ಊರುಗಳಿಂದ ಬರುತ್ತಾರೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಹಾಗಾಗಿ, ಸರ್ಕಾರ ಇಲ್ಲಿಗೆ ಪೊಲೀಸರು ಹಾಗೂ ಅಧಿಕಾರಿಗಳನ್ನು ನೇಮಕ ಮಾಡಬೇಕು. ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕೃತಿ ಸೌದರ್ಯ ಸವಿಯಲಿ, ತಮ್ಮದೇ ಆದಂತಹ ಕ್ಷಣಗಳನ್ನು ಕಳೆಯಲಿ. ಆದರೆ ಎಲ್ಲ ನಿಯಮಗಳನ್ನು ಪಾಲಿಸಲಿ ಎಂದು ಮನವಿ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಕಾಫಿನಾಡಿನ ಸೌಂದರ್ಯ ಸವಿಯೋಕೆ ಬರ್ತಿರೋ ಪ್ರವಾಸಿಗರು ತಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವು ಮುಖ್ಯ ಎಂದು ಯಾರೊಬ್ಬರೂ ಯೋಚಿಸ್ತಿಲ್ಲ.