ಚಿಕ್ಕಮಗಳೂರು : ಮಲೆನಾಡಿನ ಈ ಪುಟ್ಟ ಪೋರನ ಸಾಧನೆ ಕೇಳಿದ್ರೆ ನೀವು ಅಬ್ಬಾ ಅಂತ ಬಾಯಿ ಮೇಲೆ ಬೆರಳು ಇಟ್ಕೋತ್ತೀರಾ.. 2 ವರ್ಷ 11 ತಿಂಗಳ ಬಾಲಕ ಎಸ್.ಭುವನ್ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ 1 ರಿಂದ 20 ನಂಬರ್ಸ್ ಕೇಳಿದ್ರೆ ಪಟಪಟ ಅಂತ ಹೇಳ್ತಾನೆ. ಅಷ್ಟೇ ಯಾಕೆ.. ನಮ್ಮ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು ಹೇಳು ಅಂದ್ರೇ ಒಬ್ಬರ ಹೆಸರನ್ನೂ ಮಿಸ್ ಮಾಡ್ದೇ ಹೇಳ್ತಾನೆ. ತನ್ನ ಈ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ನಿವಾಸಿಗಳಾದ ಗೌಡನಹಳ್ಳಿ ಗ್ರಾಮದ ಶಿವ ಮತ್ತು ದೀಪಿಕಾ ದಂಪತಿಯ ಪುತ್ರ ಎಸ್.ಭುವನ್. ಈತನಿಗಿನ್ನೂ 3 ವರ್ಷ ಸಹ ತುಂಬಿಲ್ಲ. ಈಗಾಗಲೇ 1 ರಿಂದ 20 ನಂಬರ್ಸ್, 1 ಮತ್ತು 2 ಟೇಬಲ್ಸ್ ಮತ್ತು ತಿಂಗಳುಗಳನ್ನು ಹೇಳಿ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾನೆ.
ಕನ್ನಡ ಕಾಗುಣಿತ, ಇಂಗ್ಲಿಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳು, ಐತಿಹಾಸಿಕ ಸ್ಥಳಗಳು, ರಾಷ್ಟ್ರಧ್ವಜ, ಚಿಹ್ನೆಗಳು, ಕನ್ನಡ -ಇಂಗ್ಲಿಷ್ ಪದಗಳ ಭಾಷಾಂತರ ಸೇರಿ ಅನೇಕ ವಿಷಯಗಳಲ್ಲಿ ವಯಸ್ಸಿಗೆ ಮೀರಿದ ಜ್ಞಾನ ಸಂಪಾದಿಸಿಕೊಂಡಿದ್ದಾನೆ. ಹೀಗಾಗಿ, 2021ರ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಇವನ ಹೆಸರು ದಾಖಲಾಗಿದೆ.
ಇತ್ತ ವಯಸ್ಸು ಮೂರು ಸಹ ದಾಟಿಲ್ಲ. ಇಷ್ಟು ಕಿರಿಯ ವಯಸ್ಸಿನಲ್ಲೇ ಈತನ ಈ ಜ್ಞಾನಶಕ್ತಿಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿರುವುದಕ್ಕೆ ತಂದೆ-ತಾಯಿ ಹಾಗೂ ಆತನ ಕುಟುಂಬ ವರ್ಗದವರು ಅತೀವ ಸಂತಸಗೊಂಡಿದ್ದಾರೆ.
ಇದನ್ನೂ ಓದಿ:ಮಂಡ್ಯ ಹೈದನ ಟೊರ್ನಾಡೊ ಕಿಕ್ಗೆ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಗರಿ: ಟೀ ಮಾರುವ ಯುವಕನ ಮೇರುಸಾಧನೆ