ಚಿಕ್ಕಮಗಳೂರು : ಗಣಪತಿಯನ್ನು ನಿಮಜ್ಜನ ಮಾಡಿ ಬರುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿರುವ ದುರ್ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 47 ವರ್ಷದ ರಾಜು, 35 ವರ್ಷದ ರಚನಾ ಹಾಗೂ 26 ವರ್ಷದ ಪಾರ್ವತಿ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಬಿ ಹೊಸಳ್ಳಿ ಗ್ರಾಮದಲ್ಲಿ ಇರಿಸಿದ್ದ ಗಣಪತಿಯನ್ನು ಗ್ರಾಮದ ಕೆರೆಯಲ್ಲಿ ಗಣೇಶನ ನಿಮಜ್ಜನ ಮಾಡಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಗಣೇಶನ ನಿಮಜ್ಜನ ಕಾರ್ಯಕ್ರಮ ಮುಕ್ತಾಯದ ಬಳಿಕ ಐದಾರು ಜನ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕುಳಿತುಕೊಂಡು ಬರುತ್ತಿದ್ದರು.
ಟ್ರ್ಯಾಕ್ಟರ್ನಲ್ಲಿ ಗಣಪತಿಗಾಗಿ ಡೆಕೋರೇಷನ್ ಮಾಡಲಾಗಿದ್ದ ಮಂಟಪವೊಂದು ಇತ್ತು. ವಾಪಸ್ ಬರುವಾಗ ಮಂಟಪಕ್ಕೆ ವಿದ್ಯುತ್ ತಂತಿ ತಗುಲಿದ್ದು, ಟ್ರಾಲಿ ತುಂಬೆಲ್ಲ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಶಾಕ್ನಿಂದಾಗಿ ತೀವ್ರ ಅಸ್ಪಸ್ಥರಾಗಿದ್ದವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ. ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥರಾಗಿದ್ದ ಸಂಗೀತ ಹಾಗೂ ಪಲ್ಲವಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಟ್ರ್ಯಾಕ್ಟರ್ ನಲ್ಲಿದ್ದ ಮತ್ತೋರ್ವ ಮಹಿಳೆ ಗೌರಿ ಎಂಬುವರಿಗೆ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದ್ರೆ ಟ್ರ್ಯಾಕ್ಟರ್ನ ಚಾಲಕನಿಗೆ ಯಾವುದೇ ಸಮಸ್ಯೆಯಾಗಿಲ್ಲ. ವಿದ್ಯುತ್ ತಂತಿ ಕೆಳ ಭಾಗದಲ್ಲಿದ್ದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಕೆಇಬಿ ವಿರುದ್ಧ ಆಕ್ರೋಶ ಹೊರಹಾಕಿ, ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಓದಿ: ಸ್ಕೂಟಿ ಸ್ಕಿಡ್ ಆಗಿದ್ದಕ್ಕೆ ಕರೆಂಟ್ ಕಂಬ ಹಿಡಿದ ಯುವತಿ ದಾರುಣ ಸಾವು: ಬೆಸ್ಕಾಂ ವಿರುದ್ಧ ಆಕ್ರೋಶ