ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿದ್ದ ಮಗ ತನ್ನ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಚನ್ನಹಡ್ಲು ಗ್ರಾಮದಲ್ಲಿ ನಡೆದಿದೆ.
ಸುಂದರ ಪೂಜಾರಿ (52) ಮೃತ ದುರ್ದೈವಿಯಾಗಿದ್ದಾರೆ. ಹಿರಿಯ ಮಗ ನಿತೇಶ್ ಎಂಬಾತ ಈ ಕೃತ್ಯ ಎಸಗಿದ್ದು, ವಿಶೇಷ ಚೇತನ ಇಬ್ಬರು ಮಕ್ಕಳು, ಪತ್ನಿ ಜೊತೆ ಸುಂದರ ಪೂಜಾರಿ ವಾಸವಿದ್ದರು. ಎಲ್ಲರನ್ನೂ ಬಿಟ್ಟು ಹಿರಿಯ ಮಗ ನಿತೇಶ್ ಬೆಂಗಳೂರು ಸೇರಿಕೊಂಡಿದ್ದ.
ಇದನ್ನೂ ಓದಿ : ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ!
ಲಾಕ್ಡೌನ್ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಮನೆಗೆ ಪಾಪಿ ಪುತ್ರ ಮರಳಿ ಬಂದಿದ್ದ. ಹಣ ನೀಡುವಂತೆ ತಂದೆ-ತಾಯಿಯನ್ನು ನಿತೇಶ್ ಪೀಡಿಸುತ್ತಿದ್ದ. ಹಣ ನೀಡದ್ದಕ್ಕೆ ಕುಪಿತಗೊಂಡು ತಂದೆಗೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿಯೇ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪಿದ್ದಾರೆ. ಬಾಳೂರು ಪೊಲೀಸರು ಆರೋಪಿಯನ್ನ ಬಂಧನ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.