ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಇರುವ ನಟರಾಜ್ ಎಂಬುವವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.
ನಟರಾಜ್ ಅವರ ಮನೆಯ ಸಮೀಪ ಇದ್ದ ಹತ್ತು ಅಡಿ ಉದ್ದದ ಹೆಬ್ಬಾವನ್ನು ತೋಟದ ಕಾರ್ಮಿಕರು ನೋಡಿ ಬೆಚ್ಚಿ ಬಿದ್ದಿದ್ದು, ಕೂಡಲೇ ಈ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಾವನ್ನು ಒಪ್ಪಿಸಿದ್ದಾರೆ.
ಹೆಬ್ಬಾವನ್ನು ಹಿಡಿದ ಕಾರ್ಮಿಕರು ಹಾವಿನ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದು, ಸೆರೆ ಹಿಡಿದ ಹೆಬ್ಬಾವನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಮುತ್ತೋಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.