ಚಿಕ್ಕಮಗಳೂರು : ರಸ್ತೆಯಲ್ಲಿ ತೀವ್ರ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಪಲ್ಟಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ನಡೆದಿದೆ.
ಕಾರಿನಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಮಂಜು ಕವಿದಿದ್ದ ಕಾರಣ ಚಾರ್ಮಾಡಿ ಘಾಟಿಯ ಸೋಮನಕಾಡು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು ಜಲಪಾತದತ್ತ ಮುನ್ನುಗ್ಗಿ ಮಗುಚಿಕೊಂಡು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ.
ಈ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆ ಮೂಲದ ಐವರು ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಜಲಪಾತದ ಬಳಿ ಮಗುಚಿ ಬಿದ್ದ ಕಾರನ್ನು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಿಟಾಚಿ ಮೂಲಕ ಮೇಲೆತ್ತಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.