ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅರಿಶಿನಗುಪ್ಪೆ ಅರಣ್ಯ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಅರಿಶಿನಗುಪ್ಪೆ ಅರಣ್ಯ ಪ್ರದೇಶ ಸರ್ವೇ ನಂ. 52 ರಲ್ಲಿ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ನಾಲ್ಕು ದಿನಗಳ ಹಿಂದೆ ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದರ ತೆರವಿಗೆ ಮುಂದಾದಾಗ ಪ್ರತಿಭಟನಾನಿರತ ಮಹಿಳೆಯರು ಪ್ರತಿಮೆಯನ್ನು ತಬ್ಬಿ ಗೋಳಾಡಿದ್ರು. ಈ ಸಂದರ್ಭ ಪ್ರತಿಭಟನಾಕಾರರು ಹಾಗೂ ಪ್ರತಿಮೆಯನ್ನು ಪೊಲೀಸರು ವಶಕ್ಕೆ ಪಡೆದರು.
ನಾಲ್ಕು ದಿನಗಳ ಹಿಂದೆಯೇ ಅರಣ್ಯ ಪ್ರದೇಶದಲ್ಲಿ ಪ್ರತಿಮೆ ನಿರ್ಮಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಉಪಚುನಾವಣೆ ಇದ್ದ ಕಾರಣ ಕ್ರಮ ಕೈಗೊಳ್ಳಲಾಗಿರಲಿಲ್ಲ. ಸದ್ಯ ಚಿಕ್ಕಮಗಳೂರು ತಹಶೀಲ್ದಾರ್ ನಂದಕುಮಾರ್ ನೇತೃತ್ವದಲ್ಲಿ ಪ್ರತಿಮೆ ತೆರವುಗೊಳಿಸಿ ನಗರದ ಅಲ್ಪ ಸಂಖ್ಯಾತರ ಮಹಿಳಾ ವಸತಿ ನಿಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಈ ಪ್ರತಿಮೆಯನ್ನು ದುರುಪಯೋಗಪಡಿಸಿಕೊಂಡು, ಪ್ರತಿಭಟನೆಯ ನೇತೃತ್ವ ವಹಿಸಿದ ಸಂತೋಷ್ ವಿರುದ್ಧ ದೂರು ದಾಖಲಿಸಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.