ಚಿಕ್ಕಮಗಳೂರು : ಎರಡು ಹಂತದಲ್ಲಿ ನಡೆಯಬೇಕಿದ್ದ ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ದತ್ತ ಜಯಂತಿಯ ಅಂಗವಾಗಿ ಒಂದೇ ಹಂತದಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಆಯೋಗ ದಿನಾಂಕ ನಿಗದಿ ಮಾಡಿತ್ತು. ಡಿಸೆಂಬರ್ 22 ರಂದು ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಮಾತ್ರ ಗ್ರಾ.ಪಂ.ಚುನಾವಣೆ ನಡೆಯಬೇಕಿತ್ತು. ತಾರೀಖು 27 ರಂದು ಕಡೂರು, ತರೀಕೆರೆ, ಎನ್.ಆರ್.ಪುರ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ 2ನೇ ಹಂತದ ಚುನಾವಣೆ ನಡೆಯಬೇಕಿತ್ತು.
ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಡಿಸೆಂಬರ್ 27 ರಿಂದ 29 ರ ವರೆಗೆ ದತ್ತ ಜಯಂತಿ ಅಭಿಯಾನ ನಡೆಯಲಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಒಂದೇ ಹಂತದಲ್ಲಿ ಚುನಾವಣೆ ನಡೆಸಿದರೆ ಸೂಕ್ತ ಎಂದು ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಸೂಕ್ಷ್ಮ ಜಿಲ್ಲೆಯಾಗಿದ್ದು ಕಾನೂನು ಪಾಲನೆಗೆ ಪೊಲೀಸ್ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಸೇವೆಯೂ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ಎರಡು ಹಂತದಲ್ಲಿ ಮಾಡಿದ್ದಲ್ಲಿ ಬಂದೋಬಸ್ತ್ ಮಾಡಲು ಕಷ್ಟ ಸಾಧ್ಯವಾಗುತ್ತದೆ ಎಂದು ವಿವರಿಸಿದ್ದರು.
ಓದಿ - ಕಾಂಗ್ರೆಸ್ ಭಸ್ಮಾಸುರ ಅನ್ನೋದು ಹೆಚ್ಡಿಕೆಗೆ ಈಗ ಅರ್ಥವಾಗಿದೆ: ಪ್ರಲ್ಹಾದ ಜೋಶಿ
ಬೇರೆ ಜಿಲ್ಲೆಗಳಲ್ಲೂ ಇದೇ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದೆ. ಹಾಗಾಗಿ, ಅಲ್ಲಿಂದ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದ್ದೇ ಆದಲ್ಲಿ ಸೂಕ್ತ ಅಧಿಕಾರಿ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಡಿಸಿ ಅನುಮತಿ ಕೋರಿದ್ದರು.
ಜಿಲ್ಲಾಧಿಕಾರಿಗಳ ಮನವಿಯನ್ನ ಅವಲೋಕಿಸಿ ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ರಂಜಿತಾ ಅವರು ಒಂದೇ ಹಂತದ ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿದ್ದಾರೆ.