ಚಿಕ್ಕಮಗಳೂರು : ಶಾರ್ಟ್ ಸರ್ಕ್ಯೂಟ್ನಿಂದ ಪುಸ್ತಕ ಮಳಿಗೆಯೊಂದು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೂಡಿಗೆರೆ ಪಟ್ಟಣದ ವಿನಾಯಕ ಪುಸ್ತಕ ಮಳಿಗೆ ಕರುಣಾಕರ್ ಎಂಬುವರಿಗೆ ಸೇರಿದ್ದಾಗಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಶುರುವಾದ ಈ ಮಳಿಗೆಯಲ್ಲಿ ಇಲ್ಲ ಅನ್ನೋ ವಸ್ತುಗಳೇ ಇರಲಿಲ್ಲ. ಎಲ್‌ಕೆಜಿಯಿಂದ ಹಿಡಿದು ಮಾಸ್ಟರ್ ಡಿಗ್ರಿವರೆಗಿನ ಪುಸ್ತಕಗಳು ಸೇರಿದಂತೆ ಕಲೆ, ಸಾಹಿತ್ಯ, ಉದ್ಯೋಗ ಮಾಹಿತಿಗೆ ಸಂಬಂಧಿಸಿದ ಪುಸ್ತಕಗಳು, ಕ್ರೀಡಾ ಪರಿಕರಗಳು ಲಭ್ಯವಿತ್ತು. ಆದ್ರೀಗ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಸುಮಾರು 20 ವರ್ಷಗಳ ದುಡಿಮೆಯ ಹಣದಿಂದ 10 ವರ್ಷಗಳ ಹಿಂದೆ ಕರುಣಾಕರ್ ಪುಸ್ತಕ ಮಳಿಗೆ ಶುರು ಮಾಡಿದ್ದರು. ಈ ಬಾರಿ ಸ್ಕೂಲ್, ಕಾಲೇಜುಗಳು ಆರಂಭವಾಗದಿದ್ದರಿಂದ ಭಾರೀ ಪ್ರಮಾಣದ ಪುಸ್ತಕಗಳು ಅಂಗಡಿಯಲ್ಲಿ ಸ್ಟಾಕ್ ಮಾಡಲಾಗಿತ್ತು. ಇದೀಗ ಎಲ್ಲವನ್ನು ಕಳೆದುಕೊಂಡಿರೋ ಅವರು, ಬರಿಗೈ ಆಗಿದ್ದಾರೆ.
ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವುದನ್ನು ಕಂಡಿರುವ ಅಂಗಡಿ ಮಾಲೀಕ ಕರುಣಾಕರ್, ತಮ್ಮ ಮುಂದಿನ ಭವಿಷ್ಯ ಕಲ್ಪಿಸಿಕೊಂಡು ಬೆಂಕಿ ಬಿದ್ದಿದ್ದು ಅಂಗಡಿಗಲ್ಲ, ನನ್ನ ಬದುಕಿಗೆ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ.
ಕರುಣಾಕರ್ ದಂಪತಿಗೆ 5 ತಿಂಗಳ ಕಂದಮ್ಮನ ಜೊತೆ 9 ವರ್ಷದ ಗಂಡು ಮಗುವಿದೆ. ಈ ಎಲ್ಲಾ ಪುಸ್ತಕಗಳು ಸುಟ್ಟು ಹೋಗಿದೆಯಲ್ಲಾ ಅಪ್ಪಾ? ಅಂತಾ ಮುಗ್ಧ ಧ್ವನಿಯಲ್ಲೇ ತಂದೆಗೆ ಪ್ರಶ್ನಿಸಿದ ಮಗನನ್ನು ಕಂಡರೆ ಎಂಥವರಿಗೂ ಹೃದಯ ಉಕ್ಕಿಬರಲಾರದೆ ಇರದು.