ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಆಗಿದ್ದು, ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಹತ್ತಾರು ಗ್ರಾಮಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತ ಉಂಟಾಗಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ತೊಂದರೆಗೀಡಾದ ಪ್ರದೇಶಗಳಿಗೆ ಸಂಸದೆ ಶೋಭಾ ಕರಂದ್ಲಾಜ್ಞೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದಾರೆ.
ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮಕ್ಕೆ ಸಂಸದೆ ಶೋಭಾ ಕರಂದ್ಲಾಜ್ಞೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು. ನಂತರ, ಸ್ಥಳೀಯ ಜನರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅನುಕೂಲ, ಪರಿಹಾರ ಮಾಡಿಕೊಡುವ ಭರವಸೆ ನೀಡಿದರು.
ಅಲ್ಲದೇ, ಗ್ರಾಮದ ಸುತ್ತಮುತ್ತ ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳನ್ನು ಸಹ ವೀಕ್ಷಣೆ ಮಾಡಿ ಮಾತನಾಡಿದ ಶೋಭಾ ಕರಂದ್ಲಾಜ್ಞೆ, ಮಳೆ ನೀರಿನಿಂದಾಗಿ ಕಾಫೀ ಹಾಗೂ ಅಡಿಕೆ ತೋಟದಲ್ಲಿ ಬೆಳೆಗಳೆಲ್ಲ ಸಹ ಕೊಚ್ಚಿ ಹೋಗಿದೆ. ಮನೆಗಳ ಕುರುಹೂ ಇಲ್ಲದಂತಾಗಿದೆ. ಮನೆಗಳು, ತೋಟಗಳು ಇದ್ದ ಜಾಗದಲ್ಲಿ ಜಲಪಾತ ಹರಿಯುತ್ತಿದ್ದು ಕಳೆದ ವರ್ಷ ಕೊಡಗಿನಲ್ಲಿ ನಿರ್ಮಾಣವಾದ ತೊಂದರೆಗಿಂತ ಈ ಭಾಗದಲ್ಲಿ ನಾಲ್ಕು ಪಟ್ಟು ಉಂಟಾಗಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಜೊತೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಜನರು ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕಿದೆ. ಮುಖ್ಯಮಂತ್ರಿಗಳು ಇವರ ಸಹಾಯಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸವನ್ನು ಮಧುಗುಂಡಿ ಗ್ರಾಮದಲ್ಲಿ ಸಂಸದೆ ಶೋಭಾ ಕರಂದ್ಲಾಜ್ಞೆ ವ್ಯಕ್ತಪಡಿಸಿದರು.