ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಣೆ ಮಾಡಿ ಬಂದವರು. ಯಾವುದೇ ಸಂಘಟನೆ ಕುರಿತು ಹೇಳಿಕೆ ನೀಡುವಾಗ ಪರಿಶೀಲಿಸಿ ಸತ್ಯಾಂಶ ತಿಳಿದುಕೊಂಡು ಮಾತನಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಕುರಿತು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಆರ್ಎಸ್ಎಸ್ ದೇಶಭಕ್ತ, ಸಾಂಸ್ಕೃತಿಕ ಸಂಘಟನೆ, ದೇಶದ ಜನರ ಸೇವೆ ಮಾಡುವ ಸಂಘಟನೆ. ಆರ್ಎಸ್ಎಸ್ ಮೇಲೆ ಯಾವುದೇ ದೇಶದ್ರೋಹದ ಅರೋಪವಿಲ್ಲ. ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ದತ್ತಪೀಠ ನಮ್ಮದಾಗುತ್ತದೆ: ಸರ್ಕಾರ ಮೂರು ಜನರ ಸಮಿತಿಯನ್ನು ರಚನೆ ಮಾಡಿದೆ. ಆದಷ್ಟು ಬೇಗ ದತ್ತಪೀಠ ನಮ್ಮದಾಗುತ್ತೆ. 365 ದಿನಗಳ ಕಾಲ ಪೂಜೆಗೆ ಅವಕಾಶ ಸಿಗುತ್ತೆ ಎನ್ನುವ ವಿಶ್ವಾಸವಿದೆ. ಹಿಂದೂ ಅರ್ಚಕರನ್ನು ಸರ್ಕಾರ ತಕ್ಷಣ ನೇಮಿಸುತ್ತೆ ಎಂದು ಕೇಂದ್ರ ಸಚಿವೆ ಹೇಳಿದರು.