ಚಿಕ್ಕಮಗಳೂರು/ಶಿವಮೊಗ್ಗ : ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ನದಿ, ಬಾವಿ, ಕೆರೆ-ಕಟ್ಟೆಗಳು ತುಂಬಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ನಯನ ಮನೋಹರ ದೃಶಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಫಾಲ್ಸ್ನಲ್ಲಿ ನೀರು ಧುಮುಕುವ ರಮಣೀಯ ದೃಶ್ಯ ನಯನ ಮನೋಹರವಾಗಿದೆ. ಭೂತಾಯಿಗೆ 80 ಅಡಿ ಎತ್ತರದಿಂದ ಪ್ರಕೃತಿಯೇ ಹಾಲಿನ ಅಭಿಷೇಕ ಮಾಡಿದಂತೆ ಕಾಣುತ್ತಿದೆ. ಹೆಬ್ಬೆ ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಮೂಕ ವಿಸ್ಮಿತರಾಗಿದ್ದು, ಈ ಹೆಬ್ಬೆ ಜಲಪಾತದ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಮುಳ್ಳಯ್ಯನಗಿರಿ ಮತ್ತಷ್ಟು ಸುಂದರವಾಗಿ ಗೋಚರಿಸುತ್ತಿದೆ.
ರಮಣೀಯವಾಗಿ ಹುಲಿಕಲ್ ಘಾಟಿಗೆ ಚಾಚಿಕೊಂಡಿದೆ ಬಾಳೆ ಬರೆ ಫಾಲ್ಸ್: ಮಲೆನಾಡಿನಾದ್ಯಂತ ಎಡೆಬಿಡದೇ ಮಳೆ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಜಲಪಾತಗಳೂ ಭರ್ತಿಯಾಗಿವೆ. ಹೊಸನಗರದ ಹಳ್ಳಕೊಳ್ಳಗಳೆಲ್ಲಾ ತುಂಬಿ ನದಿಯಂತೆ ಹರಿಯುತ್ತಿವೆ. ರಿಪ್ಪನ್ ಪೇಟೆಯ ಸಿಡಿಹಳ್ಳದಿಂದ ಹಿಡಿದು ವರಾಹಿ ಹಿನ್ನೀರಿನವರೆಗೆ ಎಲ್ಲೆಲ್ಲೂ ಜಲರಾಶಿ. ಹೊಸನಗರದ ಘಟ್ಟದ ತುಂಬೆಲ್ಲಾ ಮಂಜು ಮುಸುಕಿದ ವಾತಾವರಣ.
ರಾಜ್ಯದಲ್ಲಿ ಅಧಿಕ ಮಳೆ ಬೀಳುವ ಪ್ರದೇಶ ಹುಲಿಕಲ್ ಹೊಸನಗರದಲ್ಲಿ ಬರುತ್ತದೆ. ಹೊಸನಗರದಿಂದ ಕುಂದಾಪುರ (ಉಡುಪಿ) ಸಾಗುವಾಗ ಹುಲಿಕಲ್ ಘಾಟಿ ಸಿಗುತ್ತದೆ. ಮುಂಗಾರು ಆರಂಭವಾದರೆ ಸಾಕು ಘಾಟಿಯ ತುಂಬೆಲ್ಲ ಜಲಪಾತಗಳ ದರ್ಶನವಾಗುತ್ತದೆ. ಚಂಡಿಕಾದೇವಿ ದೇವಸ್ಥಾನದಿಂದ ಸರಿಯಾಗಿ ಘಾಟಿಯ ಮೂರನೇ ತಿರುವಿನಲ್ಲಿ ಸಿಗುವ ಬಾಳೆಬರೆ ಫಾಲ್ಸ್ ನಯನ ಮನೋಹರವಾಗಿ ಧುಮ್ಮಿಕ್ಕುತ್ತಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಘನ ವಾಹನಗಳ ಸಂಚಾರ ನಿಷೇಧವಿರುವುದರಿಂದ ಜೊತೆಗೆ ಅಷ್ಟಾಗಿ ಪ್ರವಾಸಿಗರ ದಟ್ಟಣೆಯೂ ಇಲ್ಲದೆ ಇರುವುದರಿಂದ ಈ ರಸ್ತೆಯಲ್ಲಿ ಕಾರು ಅಥವಾ ಬೈಕ್ನಲ್ಲಿ ಸಂಚರಿಸುವವರಿಗೆ ಸ್ವರ್ಗಸಾದೃಶ್ಯ ವಾತಾವರಣದ ಅನುಭವವಾಗುತ್ತದೆ.
ಇನ್ನು ಮಲೆನಾಡಿನ ಮಳೆಗೆ ಎಂದಿನಂತೆ ಜನ ಜೀವನ ಸ್ತಬ್ಧವಾಗಿದೆ. ವಾಡಿಕೆ ಮಳೆ ಇನ್ನೂ ಬರಬೇಕಿದ್ದು, ಶಿವಮೊಗ್ಗ ನಗರದ ಜನರು ಮಾತ್ರ ತತ್ತರಿಸಿಹೋಗಿದ್ದಾರೆ. ಮಲೆನಾಡಿನಲ್ಲಿ ಇನ್ನೂ ಮೂರು ದಿನ ಜಡಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಿಲ್ಲಾಡಳಿತ ಕೂಡ ವಿಕೋಪ ಎದುರಿಸಲು ಸರ್ವ ಸನ್ನದ್ಧವಾಗಿದೆ.