ಚಿಕ್ಕಮಗಳೂರು: ಪೊಲೀಸರು ಗೂಂಡಾ ವರ್ತನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿ ಬಂದಿದೆ. ಮನೆ ಬಾಗಿಲು, ಹೆಂಚು ಮುರಿದು ಒಳಗೆ ನುಗ್ಗಿದ್ದಲ್ಲದೇ, ಬಾಲಕ ಮತ್ತು ಮೂವರು ಮಹಿಳೆಯರು ಸೇರಿ 7 ಜನರನ್ನು ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಪ್ರತಿಭಟನೆ ನಡೆಸಿ ಬಾರ್ನಲ್ಲಿದ್ದ ಎಲ್ಲಾ ಪೀಠೋಪಕರಣಗಳನ್ನು ಮಹಿಳೆಯರು ಧ್ವಂಸ ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂದೇ ಮನೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಬಂಧನಕ್ಕೂ ಮುನ್ನ ಪೊಲೀಸರು ಮನೆಯ ಹೆಂಚುಗಳನ್ನು ಹೊಡೆದು, ಬಾಗಿಲು ಮುರಿದು ಗೂಂಡಾ ವರ್ತನೆ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಡೂರು ಪಿಎಸೈ ರಮ್ಯಾ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.