ಚಿಕ್ಕಮಗಳೂರು: ನಿಷೇಧದ ಮಧ್ಯೆಯೂ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್ ಮುಂದುವರಿದಿದೆ.
ಕಳೆದೆರಡು ವರ್ಷಗಳಲ್ಲಿ ಚಾರ್ಮಾಡಿ ಮಾರ್ಗದಲ್ಲಿ ಸೆಲ್ಫಿ ಕ್ರೇಜ್ಗೆ ಸಾವು-ನೋವು ಕೂಡ ಸಂಭವಿಸಿವೆ. ಕಳೆದ ವರ್ಷ ಕೂಡ ಪ್ರವಾಸಿಗನೊಬ್ಬ ಬಂಡೆ ಮೇಲಿಂದ ಜಾರಿ ಬಿದ್ದು ಕೈ ಮುರಿದುಕೊಂಡಿದ್ದ. ಈಗ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ಮತ್ತದೇ ತಪ್ಪುಗಳನ್ನ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ಚಾರ್ಮಾಡಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. 22 ಕಿ.ಮೀ ಚಾರ್ಮಾಡಿಯ ಮಧ್ಯೆ ಅಲ್ಲಲ್ಲೇ ಸಣ್ಣ ಜಲಪಾತಗಳು ಸೃಷ್ಟಿಯಾಗಿವೆ. ಪ್ರವಾಸಿಗರು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿ ಬಂಡೆಗಳ ಮೇಲೆ ಹತ್ತಿ ಸೆಲ್ಫಿ, ಫೋಟೋ ಸೆಷೆನ್ ನಡೆಸುತ್ತಿದ್ದಾರೆ.