ಚಿಕ್ಕಮಗಳೂರು: ದೇವರು ರುಜು ಮಾಡಿದನು... ರಸವಶನಾಗುತ ಕವಿ ಅದ ನೋಡಿದನು... ಕುವೆಂಪು ಅವರ ಈ ಸಾಲುಗಳಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳಸೆ ಗ್ರಾಮದ ಕಾಫೀ ತೋಟದಲ್ಲಿ ಕಂಡುಬರುವ ಬರುವ ದೃಶ್ಯ ಸಾಕ್ಷಿಯಾಗಿದೆ.
ಹೌದು.., ಬಾನಂಗಳದಲ್ಲಿ ಬಿಳಿ ರಂಗೋಲಿ ಬಿಡಿಸಿ, ಹಸಿರು ಕಾನನದ ಕೆರೆಯಲ್ಲಿ ಬಿಳಿ ಚುಕ್ಕೆ ಇಟ್ಟಂತೆ ಗೋಚರಿಸೋ ಬೆಳಕ್ಕಿಗಳ ನೋಟ ದಿನವೂ ಕಣ್ಣಿಗೆ ಹಬ್ಬದೂಟ ಬಡಿಸಿದಂತಿರುತ್ತದೆ. ಕಾಫೀ ತೋಟದ ವಿನಾಯಕ ಕೆರೆಯ ಅಂಗಳದಲ್ಲಿರೋ ಮರಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಪ್ರತಿ ವರ್ಷವೂ ಈ ಸಮಯದಲ್ಲಿ ಸುತ್ತ ಮುತ್ತಲ ಭತ್ತದ ಗದ್ದೆ, ಹಳ್ಳ- ಕೊಳ್ಳಗಳಲ್ಲಿ ಮೀನು, ಸಣ್ಣ ಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತಾ ಆಶ್ರಯ ಪಡೆದಿವೆ.
ಸಂಜೆ ಆಕಾಶದಲ್ಲಿ ರವಿ ಮರೆಯಾಗುತ್ತಿದ್ದಂತೆಯೇ ಬೆಳ್ಳಕ್ಕಿಗಳ ಗುಂಪು ತೋಟದಲ್ಲಿರುವ ಕೆರೆಯ ಬಳಿ ಹಸಿರು ಚೆಲ್ಲಿ ನಿಂತಿರೋ ಮರಗಳ ಮೇಲೆ ಬಂದು ಸೇರಿ ಚಿನ್ನಾಟವಾಡುತ್ತವೆ. ಈ ದೃಶ್ಯ ಪ್ರತಿ ದಿನವೂ ನೋಡುಗರ ಕಣ್ಣಿಗೆ ಮುದ ನೀಡುತ್ತದೆ. ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯುವುದರಿಂದ ಸಹಜವಾಗಿಯೇ ಬೆಳಕ್ಕಿಗಳು ಇಲ್ಲಿ ನಲೆಸಿ ವಂಶಾಭಿವೃದ್ಧಿ ನಡೆಸಿ, ಬಳಿಕ ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗುತ್ತವೆ.