ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು, ವಿಡಿಯೋ ಮಾಡಿ ಶ್ರೀಗಂಧ ಬೆಳೆಗಾರ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ತರೀಕೆರೆ ಪಟ್ಟಣದ ವಿಶುಕುಮಾರ್ ಎಂಬುವರು ಡೆತ್ ನೋಟ್ ಬರೆದಿಟ್ಟು, ನಿಮಗೆಲ್ಲಾ ಮೋಸ ಮಾಡಿ ಹೋಗುತ್ತಿದ್ದೇನೆ ಎಂದು ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧದ ಮರಗಳನ್ನು ತರೀಕೆರೆಯಲ್ಲಿ ಹನನ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಲಕ್ಷ್ಯ ವಹಿಸಿದೆ. 22 ಮಂದಿ ರೈತರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದ್ದು, ಪರಿಹಾರದ ಹಣಕ್ಕಾಗಿ ಅಲೆದು-ಅಲೆದು ರೈತರು ಸುಸ್ತಾಗಿ ಹೋಗಿದ್ದಾರೆ ಎಂದು ವಿಶುಕುಮಾರ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಕಳೆದ 3 ದಿನದ ಹಿಂದೆ ವಿಶುಕುಮಾರ್ ತುಮಕೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿಭಟನೆ ನಡೆಸಿದ್ದರು. ಸದ್ಯ ಮರಣ ಪತ್ರ ಬರೆದಿಟ್ಟು, ವಿಡಿಯೋ ಮಾಡಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತಂಕ್ಕೊಳಗಾಗಿದ್ದಾರೆ.