ಚಿಕ್ಕಮಗಳೂರು: ಕಡವೆ ಬೇಟೆಯಾಡಿರುವ ಆರೋಪಿಗಳು ಪರಾರಿಯಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ವಾಹನ ವಶಕ್ಕೆ ಪಡೆದಿದರು. ಈ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಸಮೀಪ ನಡೆದಿದೆ.
ದಿನೇಶ್, ಪ್ರಶಾಂತ್, ಪೂರ್ಣೇಶ್, ಸುಗಂದ್, ಸುರೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಸೂರು ಸಮೀಪದ ಕಾಫಿ ಎಸ್ಟೇಟ್ ಬಳಿ ಆರೋಪಿಗಳು ಬೃಹತ್ ಗಾತ್ರದ ಕಡವೆಯನ್ನು ಬೇಟೆಯಾಡಿದ ಬಗ್ಗೆ ಖಚಿತ ಮಾಹಿತಿ ಪಡೆದ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಮೃತ ಕಡವೆಯನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು ಕಂಡುಬಂದಿದೆ. ಕೆಲ ಹೊತ್ತಿನ ನಂತರ ಆರೋಪಿಗಳು ಪಿಕಪ್ ವಾಹನ ತಂದು ಮೃತಪಟ್ಟಿದ್ದ ಕಡವೆಯನ್ನು ತುಂಬಿಸುತ್ತಿದ್ದ ಸಮಯದಲ್ಲಿ ಇಲಾಖೆ ಸಿಬ್ಬಂದಿ ಕಾದು ಕುಳಿತು ದಾಳಿ ನಡೆಸಿ ವಾಹನ ವಶಪಡಿಸಿಕೊಂಡರು. ಈ ಕುರಿತು ಕೊಪ್ಪ ಅರಣ್ಯ ಇಲಾಖೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.