ಚಿಕ್ಕಮಗಳೂರು: ತೋಟಗಾರಿಗೆ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರನಿಗೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ಆರೋಪಿಸಿ ಇಲಾಖೆ ಮುಂಭಾಗದಲ್ಲಿ ಕುಟುಂಬ ಸಮೇತ ಧರಣಿ ನಡೆಸಿದ್ದಾರೆ.
ನಿರ್ವಾಣಪ್ಪ ಕೈಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತಿಯಾಗಿದ್ದಾರೆ. ಕರ್ನಾಟಕ ಕೈಗಾರಿಕಾ ಇಲಾಖೆಯಲ್ಲಿ ಜೇನು ಕೃಷಿ ಸಹಾಯಕರಾಗಿ 1984ರಲ್ಲಿ ಸರ್ಕಾರಿ ನೌಕರಿಗೆ ಸೇರಿದ್ದರು. ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ಸರ್ಕಾರದಿಂದ ಮೂರು ವರ್ಷದಿಂದಲೂ ಪೆನ್ಷನ್ ಬಂದಿಲ್ಲ ಅನ್ನೋದು ಇವರ ಆರೋಪ. ಕೆಇಟಿಯಲ್ಲಿ ಮೂರು ತಿಂಗಳಲ್ಲಿ ಪೆನ್ಷನ್ ನೀಡುವಂತೆ ಅದೇಶ ಬಂದಿದ್ದರೂ ನನಗೆ ಪೆನ್ಷನ್ ಕೊಡುತ್ತಿಲ್ಲ ಎಂದು ನಿರ್ವಾಣಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೋಟಗಾರಿಕಾ ಇಲಾಖೆ ನಿರ್ದೇಶಕ ವೇದಮೂರ್ತಿ, ಈ ಹಿಂದೆ ಕೈಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಸರ್ಕಾರ ನಮ್ಮ ಇಲಾಖೆಗೆ ವರ್ಗಾವಣೆ ಮಾಡಿತ್ತು. ಕೈಗಾರಿಕಾ ಇಲಾಖೆಯಿಂದ ಇವರನ್ನು ಡಿಸ್ಮಿಸ್ ಮಾಡಿದ್ದೇವೆ. ಇವರನ್ನು ಸೇವೆಯಲ್ಲಿ ಮುಂದುವರಿಸಬೇಡಿ ಎಂದು ನಿರ್ದೇಶನಾಲಯದಿಂದ ಪತ್ರ ಬಂದಿತ್ತು. ಆಗ ಪ್ರತಿಭಟನೆ ನಡೆಸಿದ್ದರು. ಮತ್ತೆ ಇವರನ್ನು ಮುಂದುವರೆಸಿ ಎಂದು ಕೈಗಾರಿಕಾ ಇಲಾಖೆಯೇ ನಿರ್ದೇಶನ ನೀಡಿದ್ದರಿಂದ ಮತ್ತೆ ಸೇವೆಯಲ್ಲಿ ಮುಂದುವರೆಸಲಾಗಿತ್ತು. ಇವರನ್ನು ಕಾಯಂ ನೌಕರ ಎಂದೇ ಮುಂದುವರಿಸಿದ್ದೆವು. ಆದರೆ, ಯಾವುದೇ ಬಡ್ತಿ ನೀಡಿಲ್ಲ. ನಿವೃತ್ತಿಯ ನಂತರ ಪೆನ್ಷನ್ ನೀಡದ ಕಾರಣ ಕೆಎಟಿಯಿಂದ ಆದೇಶ ತಂದಿದ್ದಾರೆ. ಇವರು ಈ ಸಮಸ್ಯೆಯನ್ನು ಕೋರ್ಟ್ನಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.