ಚಿಕ್ಕಮಗಳೂರು : ತುಂಗಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ತಮಿಳುನಾಡು ಮೂಲದ ಸದ್ಯ ಶೃಂಗೇರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಮೂವರನ್ನು ರಕ್ಷಣೆ ಮಾಡಲಾಗಿದೆ.
ಈ ಮೂವರು ಇಂದು ಮಧ್ಯಾಹ್ನ ತುಂಗಾ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಸ್ನಾನದ ಬಳಿಕ ಬಟ್ಟೆ ಒಣಗಿಸಲು ನದಿಯ ಮಧ್ಯ ಭಾಗಕ್ಕೆ ತೆರಳಿದ್ದರು. ಅವರು ನಡುಗಡ್ಡೆಗೆ ಹೋಗುವಾಗ ನದಿ ನೀರಿನ ಮಟ್ಟ ಕಡಿಮೆ ಇತ್ತು. ಈ ವೇಳೆ, ಏಕಾಏಕಿ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಮೂವರು ನದಿ ಮಧ್ಯೆ ಸಿಲುಕಿಕೊಂಡಿದ್ದರು. ಈ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಮೂವರನ್ನು ರಕ್ಷಣೆ ಮಾಡಿದರು.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈ ಸಂಬಂಧ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಈ ಮೂವರು ನದಿಯ ನಡುಗಡ್ಡೆ ಸಿಲುಕಿದ್ದರು. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ : ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಸೇರಿದಂತೆ ಹಲವೆಡೆ ಇಂದು ಧಾರಾಕಾರ ಮಳೆಯಾಗಿದೆ. ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಗುರುವಾರದಿಂದ ಬಿರುಸಿನ ಮಳೆಯಾಗುತ್ತಿದೆ. ಕೊಟ್ಟಿಗೆಹಾರದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ 164.2 ಮಿ.ಮೀ (16 ಸೆ.ಮೀ) ಮಳೆ ದಾಖಲಾಗಿದೆ. ಇನ್ನು ಮಳೆಯ ಅಬ್ಬರ ಮುಂದುವರೆದಿದ್ದು, ರೈತರ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದೆ.
ರೈತರು ಬೆಳೆದ ಅರೆಬಿಕಾ ಕಾಫಿ ಕೆಲವು ಕಡೆ ಹಣ್ಣಾಗಿದ್ದು, ಮಳೆಯಿಂದಾಗಿ ಬೆಳೆ ಹಾನಿ ಉಂಟಾಗವು ಆತಂಕ ಕಾಫಿ ಬೆಳೆಗಾರರಿಗೆ ಉಂಟಾಗಿದೆ. ತೀರಾ ಮಳೆಯಿಂದ ರೊಬಸ್ಟ ಕಾಫಿ ಕೂಡ ಉದುರುತ್ತಿದೆ. ಅಲ್ಲದೇ ಶೀತ ಬಾಧೆಯಿಂದ ಅಡಕೆಗಳು ಉದುರುತ್ತಿವೆ. ಅಕಾಲಿಕ ಮಳೆಯಿಂದಾಗಿ ಕಾರ್ಮಿಕರು ಕೆಲಸಕ್ಕೆ ತೆರಳಲು ಅನಾನುಕೂಲವಾಗಿದೆ. ಮಳೆಯಿಂದಾಗಿ ಕೊಟ್ಟಿಗೆಹಾರ, ಅತ್ತಿಗೆರೆ, ಸುತ್ತಮುತ್ತ ವಿದ್ಯುತ್ ಕಡಿತ ಉಂಟಾಗಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಮಳೆಯ ನಡುವೆ ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇದನ್ನೂ ಓದಿ : ದೇಗುಲಕ್ಕೆ ಕನ್ನ ಹಾಕಲು ಬರುತ್ತಿದ್ದಂತೆ ಮೊಳಗಿದ ಸೈರನ್: ಕಳ್ಳರು ಪರಾರಿ-ಸಿಸಿಟಿವಿ ದೃಶ್ಯ