ಚಿಕ್ಕಮಗಳೂರು: ಚುನಾವಣೆಗೆ ಇನ್ನು 8 ದಿನ ಬಾಕಿ ಇದ್ದು, ಇಂದು ಬಿಜೆಪಿ ಭದ್ರ ಕೋಟೆಯಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಿ ಮತಯಾಚಿಸಿದರು. ನಗರದ ಎಂ ಜಿ ರಸ್ತೆಯಿಂದ ರೋಡ್ ಶೋ ಪ್ರಾರಂಭಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿ ಹೆಚ್ ಡಿ ತಮ್ಮಯ್ಯ ಪರ ಮತಬೇಟೆ ನಡೆಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನನ್ನ ಅಜ್ಜಿ ಇಂದಿರಗಾಂಧಿ ಚಿಕ್ಕಮಗಳೂರು ಸುಂದರವಾದ ಊರು ಎಂದು ಹೇಳಿದ್ದರು, ಈಗ ನಾನು ನಿಮ್ಮನ್ನ ನೋಡಿದ್ದು ಖುಷಿಯಾಯಿತು . ಚಿಕ್ಕಮಗಳೂರಿನ ಜನ ತುಂಬಾ ಒಳ್ಳೆಯವರು. ಈ ಬಿಸಿಲಿನಲ್ಲೂ ಇಷ್ಟೊಂದು ಜನ ಬಂದಿದ್ದೀರಾ ಧನ್ಯವಾದ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಇದು ಕಳ್ಳರ ಸರ್ಕಾರ, ನಮ್ಮ ಎಂಎಲ್ಎಗಳನ್ನು ಕಳ್ಳತನ ಮಾಡಿ ರಚನೆಯಾಗಿರುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನ ಮಂತ್ರಿ ಯಾವ ನಾಯಕರ ಹೆಸರನ್ನ ಹೇಳುವುದಿಲ್ಲ. ನಾವು ಎಲ್ಲಾ ನಾಯಕರ ಹೆಸರನ್ನ ಉಲ್ಲೇಖ ಮಾಡುತ್ತೇವೆ. ನರೇಂದ್ರ ಮೋದಿ ಸಿಎಂ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಯಾರ ಹೆಸರನ್ನೂ ಹೇಳಲ್ಲ ಎಂದರು. ಬರೀ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ಪ್ರಧಾನ ಮಂತ್ರಿ ಚುನಾವಣೆ ಅಲ್ಲ. ಅವರು ಕರ್ನಾಟಕದ ರೈತರು, ಮಹಿಳೆಯರು, ಯುವಕರಿಗಾಗಿ ಏನು ಮಾಡಿದ್ದೇವೆ ಎಂದು ಹೇಳಿಲ್ಲ. ಮೂರು ವರ್ಷದಲ್ಲಿ ರಾಜ್ಯ ಬಿಜೆಪಿಯವರು ಏನು ಮಾಡಿದ್ದರು. ಮುಂದೆ ಏನೂ ಮಾಡುತ್ತೇವೆ ಎಂದು ಹೇಳುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ನಿಮ್ಮಿಂದ ಹಣ ಕಳ್ಳತನ ಮಾಡಿದ್ದೆ. ಈಗ ಇಲ್ಲಿರುವುದು ಬಹುಮತ ಪಡೆದಿರುವ ಸರ್ಕಾರವಲ್ಲ. ಕಳ್ಳತನ ಮಾಡಿದ ಸರ್ಕಾರ. ಭ್ರಷ್ಟಾಚಾರದ ಹಣದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಯಾರನ್ನೇ ಕೇಳಿ 40 ಅದ್ರೆ ಏನೆಂದು, ಅವರು 40 ಪರ್ಸೆಂಟ್ ಅಂತಾ ಹೇಳ್ತಾರೆ. ಪ್ರಧಾನಿ ಕರ್ನಾಟಕಕ್ಕೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ. ಪ್ರಧಾನಿ ಮೋದಿ ಕಂಟ್ರಾಕ್ಟರ್ ಪತ್ರಕ್ಕೆ ಉತ್ತರ ನೀಡಲಿಲ್ಲ. ಕರ್ನಾಟಕ ರೈತರಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ ಹೇಳಿ. ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ. ಅವರ ಬಗ್ಗೆ ಅವರಿಗೆ ಹೇಳಿಕೊಳ್ಳೋಕೆ ಸಂತೋಷ ಅಷ್ಟೇ. ಬಿಜೆಪಿ ನಾಯಕರೇ ರಾಜ್ಯದ ಜನತೆ ಬಗ್ಗೆ ಪೆಟ್ರೋಲ್, ಗ್ಯಾಸ್, ಬೆಲೆ ಏರಿಕೆ ಬಗ್ಗೆ ಮಾತಾನಾಡಿ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಬಂದರೆ ಜನಪರ ಕೆಲಸ ಮಾಡುತ್ತೆ. ವಿವಿಧ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ. ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುತ್ತೇವೆ. ಇಲ್ಲಿನ ಮಹಿಳೆಯರಿಗೆ ಗ್ಯಾಸ್ ತೆಗೆದುಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಪ್ರತಿ ಮಹಿಳೆ ಅಕೌಂಟಿಗೆ 2 ಸಾವಿರ ಹಾಕುತ್ತೇವೆ. ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ. ಮಹಿಳೆಯರಿಗಾಗಿ ಗೃಹ ಜ್ಯೋತಿ ಕಾರ್ಯಕ್ರಮ ನೀಡುತ್ತೇವೆ. ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ. ಇದರಿಂದ ಲಕ್ಷಾಂತರ ಮಹಿಳೆಯರಿಗೆ ಉಪಯೋಗ ಅಗಲಿದೆ, ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಯಲ್ಲಿ ನೀಡುತ್ತೇವೆ.
ಪದವೀಧರರು ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಕರ್ನಾಟಕದ ರೈತರಿಗೆ ಒಂದು ಲಕ್ಷ 50 ಸಾವಿರ ಕೋಟಿ ನೀಡುತ್ತೇವೆ. ಹೈನುಗಾರಿಕೆಗೆ ಉತ್ತೇಜನ 5 ರೂ ಸಬ್ಸಿಡಿ ಬದಲಾಗಿ 7 ರೂ. ನೀಡುತ್ತೇವೆ. ಈ ಎಲ್ಲಾ ಯೋಜನೆ ಮೊದಲ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡುತ್ತೇವೆ. ಬಿಜೆಪಿ ಅವರಿಗೆ 40 ಅಂದ್ರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ 40 ಸ್ಥಾನ ನೀಡಿ ಕಾಂಗ್ರೆಸ್ 150 ಸ್ಥಾನ ನೀಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಕೆಪಿಸಿಸಿಯ ಪ್ರಣಾಳಿಕೆ ಐತಿಹಾಸಿಕವಾದದ್ದು: ರಾಹುಲ್ ಗಾಂಧಿ