ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಹಗಲಿನಲ್ಲಿಯೂ ರಸ್ತೆಯಲ್ಲಿ ಸಂಚಾರ ಮಾಡಲು ಜನರು ಹಿಂದೇಟು ಹಾಕುವಂತಹ ಪರಿಸ್ಥತಿ ನಿರ್ಮಾಣವಾಗಿದೆ.
ಜಿಲ್ಲೆಯ ತರೀಕರೆ ತಾಲೂಕಿನ ಸಂತವೇರಿ ಘಾಟ್ನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಯಾಣಿಸಬೇಕಿದೆ. ಸಂತವೇರಿ, ಉಡೇವಾ, ಲಿಂಗದಹಳ್ಳಿ, ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಒಂದು ಹಂತದವರೆಗೆ ಇದ್ದ ಆನೆ ಹಾವಳಿ ಇಂದು ನಡು ರಸ್ತೆಗೆ ಬಂದು ಜನರು ತೊಂದರೆ ಅನುಭವಿಸುವಂತಾಗಿದೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಂತವೇರಿ ಘಾಟ್ ನಡು ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಬಸ್ಗೆ ಅಡ್ಡವಾಗಿ ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೆ ಬಸ್ ಮುಂಭಾಗಕ್ಕೆ ಆಗಮಿಸಿ 1 ಕಿ.ಮೀ. ಫಾಲೋ ಮಾಡಿತ್ತು. ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿಗೆ ಅಡ್ಡವಾಗಿ ಬಂದು ಹಣ್ಣು ತಿಂದು ಗಾಡಿಯನ್ನು ಪಕ್ಕ ತಳ್ಳಿದ್ದ ಘಟನೆಯೂ ಈ ರಸ್ತೆಯಲ್ಲಿ ನಡೆದಿದೆ.
ರಾತ್ರಿ ಹಗಲು ಎನ್ನದೇ ದಾಳಿ ನಡೆಸುವ ಕಾಡಾನೆ ಕಾಟದಿಂದ ಜನರು ಈ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಇಬ್ಬರು ರೈತರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಮಾತ್ರ ಸಂತವೇರಿ ಘಾಟ್ ರಸ್ತೆಯಲ್ಲಿ ಆನೆ ಹವಾಳಿ ಇದೆ ಎನ್ನುವ ಬೋರ್ಡ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.