ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐಯಿಂದ ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಮಹಿಳೆಗೆ ಕರೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಠಾಣೆಯ ಪಿಎಸ್ಐ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಠಾಣಾಧಿಕಾರಿ ಅರ್ಜುನ್ ವಿರುದ್ಧ ಯುವಕ ಗಂಭೀರ ಆರೋಪ ಮಾಡಿದ್ದಾನೆ ಎನ್ನಲಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿನಾ ಕಾರಣ ಠಾಣೆಗೆ ಕರೆಸಿಕೊಂಡ ಠಾಣಾಧಿಕಾರಿ ಅರ್ಜುನ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ನನಗೆ ಮೂತ್ರ ಕುಡಿಸಿದ್ದಾರೆ ಎಂದು ದೌರ್ಜನ್ಯಕ್ಕೊಳಗಾದ ವ್ಯಕ್ತಿ ಗಂಭೀರ ಆರೋಪ ಮಾಡಿದ್ದಾನೆ. ಯುವಕ ಕೂಲಿ ಕೆಲಸ ಮಾಡುತ್ತಿದ್ದು, ಯುವಕನ ಮೇಲೆ ನಡೆದಿರುವ ಹಲ್ಲೆ ಹಾಗೂ ಅಮಾನವೀಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸೇಡಂನ ಖಾಸಗಿ ಕೋವಿಡ್ ಸೆಂಟರ್ ಮೇಲೆ ದಾಳಿ: ಕಲ್ಲು, ಬಡಿಗೆಯಿಂದ ವೈದ್ಯರ ಮೇಲೆ ಹಲ್ಲೆ
ದಂಪತಿ ಕಲಹದಲ್ಲಿ ಯುವಕ ಮಹಿಳೆಗೆ ಫೋನ್ ಮಾಡಿದ್ದಾನೆ ಎಂದು ಮಹಿಳೆ ಪತಿ ಠಾಣೆಗೆ ದೂರು ನೀಡಿದ್ದರು. ಇದೇ ತಿಂಗಳು 18 ರಂದು ಪೊಲೀಸ್ ಠಾಣೆಗೆ ವ್ಯಕ್ತಿಯನ್ನು ಕರೆದೊಯ್ದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ದಲಿತ ಪರ ಸಂಘಟನೆಗಳು ಪಿಎಸ್ಐ ವಿರುದ್ಧ ದೂರು ಸಹ ನೀಡಿವೆ. ಈ ಬಗ್ಗೆ ಡಿವೈಎಸ್ಪಿ ಪ್ರಭು ಅವರಿಗೆ ಈ ಪ್ರಕರಣದ ತನಿಖೆ ನಡೆಸುವಂತೆ ಎಸ್ಪಿ ಅಕ್ಷಯ್ ಆದೇಶ ನೀಡಿದ್ದು, ಠಾಣಾಧಿಕಾರಿ ಅರ್ಜುನ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ.