ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐಯಿಂದ ಮೂತ್ರ ಕುಡಿಸಿದ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕ ಪುನೀತ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ವಿಡಿಯೋದಲ್ಲಿ ಪುನೀತ್, ನನ್ನ ಪ್ರಕರಣಕ್ಕೆ ಪಿಎಸ್ಐ ಅರ್ಜುನ್ ಹೇಳಿದಕ್ಕೆ ಮೂತ್ರ ಮಾಡಿದಂತಹ ಚೇತನ್ ಎಂಬ ವ್ಯಕ್ತಿ ಪ್ರಮುಖ ಸಾಕ್ಷಿಯಾಗಿದ್ದಾನೆ. ಆದರೆ, ಇದೀಗ ಚೇತನ್ ಈ ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುತ್ತಿದ್ದಾನೆ. ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ನಾನು ಕೂಡ ಚೇತನ್ ಜೊತೆ ಮಾತನಾಡಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಅವರು ನನ್ನ ಕೈಗೆ ಸಿಗುತ್ತಿಲ್ಲ. ಈ ಘಟನೆಯಾದ ನಂತರ ಪೊಲೀಸರು ನನ್ನ ಮನೆ ಬಳಿಬಂದು ನಿನಗೆ 2 ಲಕ್ಷ ಹಣದ ಜೊತೆಗೆ ಡಿವೈಎಸ್ಪಿ ಕಚೇರಿಯಲ್ಲಿ ಒಂದು ಕೆಲಸ ಕೊಡಿಸುತ್ತೇವೆ. ಇದನ್ನು ಇಲ್ಲಿಗೆ ನಿಲ್ಲಿಸಿಬಿಡು ಎಂದು ಆಮಿಷ ಒಡ್ಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಠಾಣೆಗೆ ಕರೆದು ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಪಿಎಸ್ಐ ವಿರುದ್ಧ ಎಫ್ಐಆರ್
ಆದರೆ, ನನಗೆ ಆಗಿರುವ ನೋವು ನನಗೆ ಮಾತ್ರ ಗೊತ್ತಿದೆ. ನಾನು ಇವರ ವಿರುದ್ಧ ಹೋರಾಟ ಮಾಡೇ ಮಾಡುತ್ತೇನೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಭಾಗಿಯಾಗಿರುವುದರಿಂದ ನನಗೆ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ಕಾಡುತ್ತಿದೆ. ಇಲ್ಲಿ ನ್ಯಾಯಾಂಗ ತನಿಖೆ ಆಗಲೇಬೇಕು. ನಾನು ಆರು ತಿಂಗಳ ಹಿಂದೆ ಮಹಿಳೆಯ ಜೊತೆ ಮಾತನಾಡಿದ ಆಡಿಯೋವನ್ನು ಈ ಪ್ರಕರಣಕ್ಕೆ ತಳಕು ಹಾಕುತ್ತಿದ್ದಾರೆ. ಆ ಮಹಿಳೆಯಿಂದ ಪ್ರಕರಣ ಕೂಡ ದಾಖಲು ಮಾಡಿಸಿದ್ದಾರೆ ಎಂದಿದ್ದಾನೆ.
ಈ ಸುದ್ದಿಯನ್ನೂ ಓದಿ: ಠಾಣೆಗೆ ಕರೆದು ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ