ಚಿಕ್ಕಮಗಳೂರು: ಸುಗ್ರೀವಾಜ್ಞೆ ಮೂಲಕ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನತಂತ್ರ ಧೋರಣೆ ಖಂಡಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವಂತೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಒತ್ತಡ ಹೇರುವ ಮೂಲಕ ಪ್ರಜಾತಂತ್ರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ರಾಜ್ಯದಲ್ಲಿ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೇರವಾಗಿ ನಿರ್ದೇಶನ ನೀಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಪ್ರಹಾರ ಮಾಡುತ್ತಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ, ರೈತರಿಗೆ ಮರಣ ಶಾಸನ ಬರೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಬಿಜೆಪಿಯೇತರ ಎಲ್ಲ ವಿರೋಧ ಪಕ್ಷಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ನಾವು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಎಂದು ವಿವಿಧ ಸಂಘಟನೆಯ ಮುಖಂಡರು ಹೇಳಿದರು.