ಚಿಕ್ಕಮಗಳೂರು: ಟ್ರಸ್ಟ್ ನಡೆಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಜಿಲ್ಲೆಯ ಕಳಸದ ಬಾಳೆಹೊಳೆ ಗ್ರಾಮಸ್ಥರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳಸದ ಬಾಳೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ. ಸುಮಾರು 2 ವರ್ಷದ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಸಗಿ ಸುಪರ್ದಿಗೆ ನೀಡಲಾಗಿತ್ತು. ಈಗ ಮತ್ತೆ ಸರ್ಕಾರದ ಸುಪರ್ದಿಗೆ ಆರೋಗ್ಯ ಕೇಂದ್ರ ವಹಿಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಜನ ಖಾಸಗಿಯಾಗೇ ಇರಲಿ ಎಂದು ಧರಣಿ ನಡೆಸಿದ್ದಾರೆ.
ಆರೋಗ್ಯ ಕೇಂದ್ರವನ್ನು ಬೆಳಗಾವಿ ಮೂಲದ ದಾನೇಶ್ವರಿ ಟ್ರಸ್ಟ್ ನಡೆಸುತ್ತಿತ್ತು. ಈಗ ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಮುಂದಾಗಿದೆ. ಒಂದು ವೇಳೆ ಆಸ್ಪತ್ರೆ ಸರ್ಕಾರದ ವಶಕ್ಕೆ ಹೋದರೆ, ವ್ಯವಸ್ಥೆ ಹಾಳಾಗಿ ಹೋಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.