ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಷ್ಟ್ರ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವಿವಿಧ ಪಕ್ಷಗಳ ರಾಷ್ಟ್ರೀಯ ನೇತಾರರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಡೆಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಹಾಗೂ ಬಾಳೆ ಹೊನ್ನೂರಿನ ರಂಭಾಪುರಿ ಪೀಠಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದರು. ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನರಸಿಂಹ ವನದಲ್ಲಿರುವ ಗುರು ನಿವಾಸಕ್ಕೆ ತೆರಳಿ ನಂತರ ಗುರುಗಳ ಆಶೀರ್ವಾದ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಶಂಕರಾಚಾರ್ಯ ಮಠದ ಗುರುಗಳನ್ನು ಭೇಟಿ ಮಾಡಿದೆ. ಅವರು ನಮ್ಮ ಅಜ್ಜಿ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರು ಮಠಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಇಂದಿಗೂ ನನ್ನ ಪರಿವಾರ ಸಂಘರ್ಷವನ್ನು ಎದುರಿಸುತ್ತಿದೆ. ಇಂದಿರಾ ಗಾಂಧಿ ಇಲ್ಲಿಗೆ ಬಂದಿದ್ದ ವೇಳೆಯೂ ಸಂಘರ್ಷ ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿರುವುದು ನನ್ನ ಪುಣ್ಯ. ಇಂದಿರಾ ಗಾಂಧಿ ಅವರು ಸಂಘರ್ಷ ಎದುರಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನ ಅವರೊಂದಿಗೆ ನಿಂತು ಆಶೀರ್ವಾದ ಮಾಡಿದ್ದರು. ಇದನ್ನು ನಾನು, ನನ್ನ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ರು.
ಬಳಿಕ ಬಾಳೆಹೊನ್ನೂರು ಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಾಳೆಹೊನ್ನೂರಿನಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಪ್ರತೀ ಹಂತದಲ್ಲೂ ರಾಜ್ಯದ ಜನರ ವಿಶ್ವಾಸಕ್ಕೆ ದ್ರೋಹ ಮಾಡಿದೆ. ಸುಳ್ಳು ಆಮಿಷಗಳನ್ನು ನೀಡಿದ್ದಲ್ಲದೇ ಅಧಿಕಾರಕ್ಕಾಗಿ ಕೋಟಿ ಕೋಟಿ ಹಣ ನೀಡಿ ಶಾಸಕರನ್ನು ಖರೀದಿಸಿ ಗದ್ದುಗೆ ಏರಿದೆ. ಜನಪರ ಕೆಲಸ ಮರೆತಿರುವ ಬಿಜೆಪಿ ಸರ್ಕಾರ ಸಾರ್ವಜನಿಕರ 1.50 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಪರ ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯನ್ನು ಜನ ಇಂದಿಗೂ ಹೋದಲ್ಲೆಲ್ಲ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನನ್ನ ಅಜ್ಜಿ ಇಂದಿರಾ. ಅವರ ಮೇಲೆ ದೇಶದ ಜನರು ಇಟ್ಟಿದ್ದ ಭರವಸೆ, ವಿಶ್ವಾಸವನ್ನು ಉಳಿಸಿಕೊಂಡ ಪರಿಣಾಮ ಜನ ನನ್ನನ್ನು ಇಂದಿಗೂ ಗುರುತಿಸುತ್ತಿದ್ದಾರೆ. ಇಂದಿರಾ ಗಾಂಧಿ ದೇಶದ ಜನರಿಗೆ ಎಂದಿಗೂ ವಿಶ್ವಾಸ ದ್ರೋಹ ಮಾಡಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಆದರೆ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಪ್ರತಿ ವಿಷಯದಲ್ಲೂ ಜನರಿಗೆ ವಿಶ್ವಾಸದ್ರೋಹ ಮಾಡಿಕೊಂಡು ಬಂದಿದೆ ಎಂದು ಹೇಳಿದ್ರು.
ಬಿಜೆಪಿ ಸರ್ಕಾರ ಜನಾಭಿಪ್ರಾಯದಿಂದ ರಚನೆಯಾದ ಸರ್ಕಾರವಲ್ಲ. ಶಾಸಕರನ್ನು ಖರೀದಿಸಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಸರ್ಕಾರವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಕೊಟ್ಟ ಭರವಸೆಗಳ ಪೈಕಿ ಒಂದನ್ನೂ ಈಡೇರಿಸಲ್ಲ. ಯುವಕರಿಗಾಗಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು, ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಭರವಸೆ ನೀಡಿತ್ತು. ಬೆಲೆ ಏರಿಕೆ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಪೈಕಿ ಒಂದೂ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ನಾ ಕಾವೂಂಗಾ ನಾ ಕಾನೆ ದೂಂಗಾ ಎಂದು ಘೋಷಣೆ ಮಾಡಿದ್ದ ಮೋದಿ ಅವರು ಕರ್ನಾಟಕದ ಬಿಜೆಪಿ ಸರ್ಕಾರದ ಕಮಿಷನ್ ದಂಧೆಯ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಜನರಿಗೆ ಯಾವ ಜನಪರ ಯೋಜನೆ ನೀಡದ ಬಿಜೆಪಿ ಸರ್ಕಾರ ಎಲ್ಲ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿ ಅದಾನಿ ಕಂಪನಿಗೆ ಜಿಎಸ್‍ಟಿ ಮುಕ್ತಗೊಳಿಸುತ್ತಿದೆ. ಇದರಿಂದ ಅದಾನಿ ಕಂಪನಿಗೆ 16 ಸಾವಿರ ಕೋಟಿ ರೂ. ಲಾಭವಾಗಿದೆ. ಜನರ ಬಗ್ಗೆ ಕಾಳಜಿ ಇಲ್ಲದ ಸರ್ಕಾರದಿಂದ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಆದ್ದರಿಂದ ಭ್ರಷ್ಟ ಸರ್ಕಾರವನ್ನು ಬದಲಾಯಿಸಲು ರಾಜ್ಯದ ಜನ ಮುಂದಾಗಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಪ್ರಿಯಾಂಕಾ ಭವಿಷ್ಯ ನುಡಿದರು.
ಇದನ್ನೂ ಓದಿ : ಪ್ರಿಯಾಂಕಾ ಗಾಂಧಿ ದೋಸೆ ಹಾಕಿ ಸಂತೋಷಪಟ್ಟರು : ಹೋಟೆಲ್ ಮಾಲೀಕನ ಸಂದರ್ಶನ