ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಶಾರದಾಂಬೆಯ ದರ್ಶನ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದು ನಿರ್ಗಮಿಸಿದ್ದಾರೆ.
ಬೆಳಗ್ಗೆ 11.30ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕುಟುಂಬ ಸಮೇತ ಶೃಂಗೇರಿಯ ಶಾರದಾ ಪೀಠಕ್ಕೆ ಆಗಮಿಸಿದ್ದರು. ಪತ್ನಿ, ಪುತ್ರಿ ಜೊತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ನರಸಿಂಹ ವನದ ಪಕ್ಕದಲ್ಲಿರುವ ಗುರು ನಿವಾಸಕ್ಕೆ ತೆರಳಿ ಜಗದ್ಗುರುಗಳ ಆಶೀರ್ವಾದ ಪಡೆದು, ಕೆಲಕಾಲ ಅವರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
ಉಭಯ ಶ್ರೀಗಳ ಆಶೀರ್ವಾದ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕುಟುಂಬ ಸನ್ನಿಧಿಯಿಂದ ಕಾರಿನಲ್ಲಿ ತೆರಳುವಾಗ ನೆರೆದಿದ್ದ ಜನರಿಗೆ ಕಾರಿನಲ್ಲಿ ಕುಳಿತು ಕೈ ಬೀಸಿದರು. ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಆಗಮನ ಹಿನ್ನೆಲೆ ಶೃಂಗೇರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.